ಸಚಿವ ಸಂಪುಟದಲ್ಲಿ ಹೈ-ಕ ಭಾಗಕ್ಕೆ ಅನ್ಯಾಯ : ಮಹ್ಮದ್ ರಫಿ ಅಸಮಧಾನ
ಲಿಂಗಸುಗೂರು : ತಿನ್ನುವುದು ಬದನೆಕಾಯಿ, ಹೇಳುವುದು ಶಾಸ್ತ್ರ ಎನ್ನುವಂತೆ ರಾಜ್ಯ ಸರಕಾರ ಕೇವಲ ಬಾಯಿ ಮಾತಿನಲ್ಲಿ ಅಭಿವೃದ್ಧಿ ಮಂತ್ರ ಜಪಿಸುತ್ತದೆ ಎನ್ನುವದಕ್ಕೆ ಬುಧವಾರ ಸಂಪುಟ ವಿಸ್ತರಣೆಯಲ್ಲಿ ಬೆಂಗಳೂರು-ಮೈಸೂರು ಭಾಗಕ್ಕೆ ಪ್ರಾತಿನಿಧ್ಯ ನೀಡುವ ಮೂಲಕ ಹೈ.ಕ. ಭಾಗವನ್ನು ಕಡೆಗಣಿಸಿರುವುದೇ ಸಾಕ್ಷಿಯಾಗಿದೆ ಎಂದು ಪುರಸಭೆ ಉಪಾದ್ಯಕ್ಷ ಮೊಹ್ಮದ್ ರಫಿ ಅಸಮಧಾನ ವ್ಯಕ್ತಪಡಿಸಿದರು.
ಸ್ಥಳೀಯ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯಚೂರು, ಗುಲಬರ್ಗಾ, ಕೊಪ್ಪಳ, ಬೀದರ್, ಯಾದಗಿರಿ, ಬಳ್ಳಾರಿ ಸೇರಿ ಹೈದ್ರಾಬಾದ್ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ ಸರಕಾರ ಕೇವಲ ಹೆಸರಿಗಷ್ಟೆ ಎನ್ನುವಂತಾಗಿದೆ. ಅಭಿವೃದ್ಧಿ ದೃಷ್ಠಿಯಿಂದ ಪಕ್ಷಾತೀತವಾಗಿ ಈ ಭಾಗದ ಮುಖಂಡು ಒಗ್ಗಟ್ಟಾಗಿ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿರುವದು ನಮ್ಮ ದುರದೃಷ್ಟ. ನೂರಾರು ಕೋಟಿ ರೂಪಾಯಿ ಅನುದಾನ ನೀಡುತ್ತಿರುವುದಾಗಿ ಘೋಷಣೆ ಮಾಡುವ ಸರಕಾರ ಇಲ್ಲಿನ ಪರಿಸ್ಥಿತಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಅಲ್ಲದೇ ಈ ಭಾಗದ ಶಾಸಕರುಗಳು, ಸಂಸದರುಗಳು ಯಾವುದೇ ಚಕಾರ ಎತ್ತದೇ ಇರುವುದು ಸೋಜಿಗವೆಂದು ಹೇಳಿದರು.
ಪುರಸಭೆ ಸದಸ್ಯರಾದ ಪ್ರಮೋದ ಕುಲಕರ್ಣಿ, ಮೌಲಾಸಾಬ ಗೌಳಿ, ಮುಖಂಡ ಎಂ.ಜಿಲಾನಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

