ರಾಯಚೂರು

ಅಲೆಮಾರಿ ಕುಟುಂಬಗಳಿಗೆ ಹಕ್ಕುಪತ್ರ ನೀಡುವಲ್ಲಿ ವಿಳಂಬ : ಕ್ರಮಕ್ಕೆ ಮನವಿ

ಲಿಂಗಸುಗೂರು : ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅಲೆಮಾರಿ ಸಮುದಾಯದ 23 ಕುಟುಂಬಗಳಿಗೆ ನಿವೇಶನಗಳು ಮಂಜೂರಾಗಿದ್ದರೂ ಹಕ್ಕುಪತ್ರಗಳನ್ನು ವಿತರಿಸುತ್ತಿಲ್ಲ. ಕೂಡಲೇ ಸಹಾಯಕ ಆಯುಕ್ತರಿಗೆ ಸೂಚನೆ ನೀಡಿ ಹಕ್ಕುಪತ್ರ ಕೊಡಿಸುವ ಜೊತೆಗೆ ಬಡ ಕುಟುಂಬಗಳಿಗೆ ಸೂರು ಕಲ್ಪಿಸಿಕೊಡಬೇಕೆಂದು ಹಟ್ಟಿ ಚಿನ್ನದ ಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರಿಗೆ ಫಲಾನುಭವಿಗಳು ಮನವಿ ಮಾಡಿದರು.


ಕರವೇ ಅದ್ಯಕ್ಷ ಜಿಲಾನಿಪಾಷಾರ ನೇತೃತ್ವದಲ್ಲಿ ವಜ್ಜಲ್‍ರ ನಿವಾಸಕ್ಕೆ ತೆರಳಿದ ಫಲಾನುಭವಿಗಳು, ಕರಡಕಲ್ ಸಿವಾರ್‍ದ ಸರ್ವೆ ನಂಬರ್ 286ರಲ್ಲಿ ಒಂದು ಎಕರೆ ಜಮೀನನ್ನು ನೀಡಲು ತಹಸೀಲ್ದಾರರು ಸಹಾಯಕ ಆಯುಕ್ತರು 2019ರಲ್ಲಿಯೇ ಪ್ರಸ್ತಾವನೆ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳಿಂದ ಹಕ್ಕುಪತ್ರಗಳನ್ನು ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಕೂಡಲೇ ಸಹಾಯಕ ಆಯುಕ್ತರು ಹಾಗೂ ಸಂಬಂಧಿಸಿದ ಅಧಿಕಾರಿಗಳಲ್ಲಿ ಚರ್ಚಿಸಿ ಹಕ್ಕುಪತ್ರ ಕೊಡಿಸಬೇಕು. ಹಾಗೂ ನಿವೇಶನಗಳಲ್ಲಿ ಮನೆ ಕಟ್ಟಿಕೊಳ್ಳಲು ಸರಕಾರದಿಂದ ಅನುದಾನ ಕೊಡಿಸಬೇಕೆಂದು ಕೋರಿಕೊಂಡರು.


ಫಲಾನುಭವಿಗಳ ಮನವಿಯನ್ನು ಆಲಿಸಿದ ಹಟ್ಟಿ ಚಿನ್ನದಗಣಿ ಅದ್ಯಕ್ಷರು, ಶೀಘ್ರ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಫಲಾನುಭವಿಗಳಿಗೆ ಭರವಸೆ ನೀಡಿದರು.


ಕರವೇ ಅದ್ಯಕ್ಷ ಜಿಲಾನಿಪಾಷಾ, ಕಾರ್ಯದರ್ಶಿ ಶಿವರಾಜ ನಾಯ್ಕ, ನಗರ ಘಟಕ ಅದ್ಯಕ್ಷ ಹನುಮಂತ ನಾಯಕ, ಖಜಾಂಚಿ ಅಜೀಜಪಾಷಾ ಸೇರಿ ಅಲೆಮಾರಿ ಸಮುದಾಯದ ಫಲಾನುಭವಿಗಳು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!