ರಾಯಚೂರು ಜಿಲ್ಲೆಯಲ್ಲಿ ಕೋವಿಡ್ -19 ವ್ಯಾಕ್ಸಿನ ಸಂಗ್ರಹಕ್ಕೆ ಸಮಸ್ಯೆಯಿಲ್ಲ -ಡಾ. ಅನೀಲ್ ತಾಳಿಕೋಟೆ
ರಾಯಚೂರು,ಡಿ.೨೯:- ಭಾರತೀಯ ಔಷಧಿ ನಿಯಂತ್ರಣ ಮಂಡಳಿಯ ನಿರ್ದೇಶನದಂತೆ ಜಿಲ್ಲೆಯಲ್ಲಿ ಮೂರು ಹಂತದಲ್ಲಿ ಕೋವಿಡ್ ವ್ಯಾಕ್ಸಿನ್ ವಿತರಿಸಲಾಗುವುದು, ಈ ಔಷದ ಸಂಗ್ರಣೆಗೆ ಜಿಲ್ಲೆಯ ರಿಮ್ಸ್ ವೈದ್ಯಕೀಯ ಸಂಶೋದನಾ ಕೇಂದ್ರ ಮತ್ತು ನವೋದಯ ವೈದ್ಯಕೀಯ ಮಹಾವಿದ್ಯಾಲಯ ಸೇರಿದಂತೆ ಕೃಷಿ ವಿಶ್ವವಿದ್ಯಾಲಯದ ಸಂಗ್ರಹಾಲಯಗಳನ್ನು ಬಳಸಿಕೊಳ್ಳಲಾಗುವುದು ಎಂದು ವಿಶೇಷ ವೈದ್ಯಕೀಯ ಅಧಿಕಾರಿ ಡಾ. ಅನೀಲ್ ತಾಳಿಕೋಟೆ ತಿಳಿಸಿದರು.
ಅವರು ಡಿ.೨೮ರ ಸೋಮವಾರ ನಗರದ ಜಿಲ್ಲಾ ಪಂಚಾಯತ್ ಸಂಭಾಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಪಲ್ಸ್ ಪೊಲಿಯೋ ಪ್ರತಿರೋಧಕ ದಿನ ಮತ್ತು ಕೋವಿಡ್-೧೯ ವ್ಯಾಕ್ಸಿನ್ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ೨೧,೮೫,೫೮೬ ಜನಸಂಖ್ಯೆಯಿದೆ, ಅವರಲ್ಲಿ ಐದು ವರ್ಷದೊಳಗೆ ೨,೫೩,೨೦೧ ಮಕ್ಕಳಿದ್ದಾರೆ. ಗ್ರಾಮೀಣ ಮತ್ತು ನಗರ ಮಟ್ಟದಲ್ಲಿ ಪಲ್ಸ್ ಪೊಲಿಯೋ ಲಸಿಕೆ ನೀಡಲು ತಾಲೂಕ ಮಟ್ಟದ ಮತ್ತು ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ಪೊಲಿಯೋ ಕಾರ್ಯಕರ್ತರಿಗೆ ತರಬೇತಿ ನೀಡಲಾಗುವುದು. ಪಲ್ಸ್ ಪೊಲಿಯೋ ಅಭಿಯಾನಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಪೊಲಿಯೋ ಅಭಿಯಾನದ ಯಶಸ್ವಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಕೋವಿಡ್ -೧೯ ವ್ಯಾಕ್ಸಿನ್ ವಿತರಣೆ ಬಗ್ಗೆ ಮಾತನಾಡಿದ ಅವರು ರಾಜ್ಯ ಮತ್ತು ಕೇಂದ್ರ ಆರೋಗ್ಯ ಇಲಾಖೆ ಮಾರ್ಗದರ್ಶನ ನಿಯಮದಂತೆ ಮೂರು ಹಂತಗಳಲ್ಲಿ ಕೋವಿಡ್ ವಿತರಣೆಗೆ ಯೋಜನೆ ರೂಪಿಸಿದ್ದು. ಈಗಾಗಲೇ ೧೦ಕ್ಕೂ ಹೆಚ್ಚು ಕಂಪನಿಗಳು ವ್ಯಾಕ್ಸಿನ್ ಸಿದ್ದಪಡಿಸಿವೆ, ಅವುಗಳಲ್ಲಿ ಸರ್ಕಾರ ಯಾವುದಕ್ಕೆ ಪರವಾನಗಿ ನೀಡುತ್ತದೆ ಅದನ್ನು ಆರೋಗ್ಯ ಇಲಾಖೆ ಸರಬರಾಜು ಮಾಡಲಿದೆ. ಇದನ್ನು ಮೂರು ಹಂತದಲ್ಲಿ ವಿತರಿಸಲಾಗುವುದು ಎಂದರು.
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಆರೋಗ್ಯ ಸಹಾಯಕರಿಗೆ ಮತ್ತು ಸಿಬ್ಬಂದಿಗಳಿಗೆ, ಎರಡನೆ ಹಂತದಲ್ಲಿ ಪೊಲೀಸ್, ಪೌರಕಾರ್ಮಿಕ, ಗೃಹ ರಕ್ಷಕ, ಮೂರನೇ ಹಂತದಲ್ಲಿ ೫೦ ವರ್ಷ ಮೇಲ್ಪಟ್ಟ ವಯಸ್ಕರಿಗೆ ಮತ್ತು ೫೦ ವರ್ಷಗಿಂತ ಕೆಳಗಿನ ವಯಸ್ಕರಿಗೆ ಈ ಕೋವಿಡ್ ವ್ಯಾಕ್ಸಿನ್ ನೀಡಲಾಗುವುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಡಾ. ವಿಜಯ, ರಿಮ್ಸ್ ಅಧೀಕ್ಷಕ ಭಾಸ್ಕರ್, ಮಹಿಳಾ ಮತ್ತು ಮಕ್ಕಳ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

