ರಾಯಚೂರು

ಕೋವಿಡ್ ನಿಯಮ ಉಲ್ಲಂಘಿಸಿ, ಹುಂಬುತನ ತೋರುತ್ತಿರುವ ಶಾಸಕ : ಆರೋಪ

ಹಟ್ಟಿ ಕಂಪನಿಯಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ ಆಗಿದೆ, ಫೋಸು ಕೊಡುವುದು ಬೇಡ.
ಪೋಸಿಂಗ್ ರಾಜಕಾರಣ ಮಾಡುವುದು ಶಾಸಕರು ನಿಲ್ಲಿಸಲಿ, ಭಾಷೆಯ ಮೇಲೆ ಹಿಡಿತವಿರಲಿ.
ಪರ್ಸೆಂಟೇಜ್ ರಾಜಕಾರಣದ ಮೂಲಕ ಕ್ಷೇತ್ರದ ಜನರ ಹಿತಾಸಕ್ತಿ ಬಲಿ ಕೊಡುತ್ತಿರುವ ಶಾಸಕ.
ರಾಜ್ಯ-ಕೇಂದ್ರ ಸರಕಾರದ ಜನಸೇವೆಯನ್ನು ಸಹಿಸದೇ ಟೀಕೆಯಲ್ಲೇ ಕಾಂಗ್ರೆಸ್ಸಿಗರು ಕಾಲಹರಣ.

ಲಿಂಗಸುಗೂರು : ಕೋವಿಡ್ ಸಂಕ್ರಮಣ ಕಾಲದಲ್ಲಿ ಯಾವುದೇ ಸಭೆ, ಪರಿಶೀಲನಾ ಕಾರ್ಯಗಳನ್ನು ಮಾಡುವಂತಿಲ್ಲ. ಏನಿದ್ದರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಬೇಕು. ಅನಿವಾರ್ಯವಿದ್ದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ನಾಲ್ಕಾರು ಅಧಿಕಾರಿಗಳೊಂದಿಗೆ ಚರ್ಚಿಸಬೇಕೆ ಹೊರತು, ಸ್ಥಳೀಯ ಶಾಸಕರು ಇದರ ಬಗ್ಗೆ ಅರಿವಿಲ್ಲದೇ ಹುಂಬುತನ ಪ್ರದರ್ಶಿಸುತ್ತಾ ಬೆಂಬಲಿಗರೊಂದಿಗೆ ಸುತ್ತಾಡುತ್ತಾ ಕೋವಿಡ್ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆಂದು ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್ ಆರೋಪಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಟ್ಟಿ ಚಿನ್ನದಗಣಿ ಕಾರ್ಮಿಕರಿಗಾಗಿ ನಾವುಗಳು ಈಗಾಗಲೇ ಕೋವಿಡ್ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸಿದ್ಧತೆ ಮಾಡಿಕೊಂಡಿದ್ದೇವೆ. ನಮ್ಮ ಅಧಿಕಾರಿಗಳು ಈ ನಿಟ್ಟಿನಲ್ಲಿ ಸಂಪೂರ್ಣವಾಗಿ ತಯಾರಿ ಮಾಡಿಕೊಂಡಿದ್ದಾರೆ. ಸುಖಾಸುಮ್ಮನೇ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಾ, ತಾನೊಬ್ಬ ಜವಾಬ್ದಾರಿಯುತ ಜನಪ್ರತಿನಿಧಿ ಎನ್ನುವುದನ್ನೂ ಮರೆತು ಭಾಷೆಯ ಮೇಲೆ ಹಿಡಿತವಿಲ್ಲದೇ ಮಾತನಾಡುವ ಮೂಲಕ ತನ್ನ ಯೋಗ್ಯತೆಯನ್ನು ಪ್ರದರ್ಶನ ಮಾಡಿರುವುದು ಖಂಡನೀಯ ಎಂದು ಶಾಸಕ ಹೂಲಗೇರಿಯವರು ಗುರುವಾರ ಹಟ್ಟಿಯಲ್ಲಿ ಹೇಳಿಕೆ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ನಾವು ಮಾಡಿರುವ ಕೆಲಸಕ್ಕೆ ಬಂದು ಫೋಸು ನೀಡುವುದನ್ನು ಬಿಟ್ಟು, ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಹೇಳಿದರು.

ನಮ್ಮ ಅಧಿಕಾರದ ಎರಡು ಅವಧಿಗಳಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ತಂದ ನೂರಾರು ಕೋಟಿ ರೂಪಾಯಿಗಳ ಅನುದಾನದ ಕಾಮಗಾರಿಗಳಿಗೇ ಗುದ್ದಲಿ ಪೂಜೆ ಮಾಡುತ್ತಾ ಮೂರು ವರ್ಷಗಳ ಕಾಲ ಫೋಸು ಕೊಟ್ಟಿರುವ ಶಾಸಕರು, ಕ್ಷೇತ್ರದ ಹಿತ ಕಾಯುವ ನಿಟ್ಟಿನಲ್ಲಿ ತಾವುಗಳು ಸರಕಾರಕ್ಕೆ ಎಷ್ಟು ಪತ್ರಗಳನ್ನು ಬರೆದಿದ್ದೀರಿ. ಕೋವಿಡ್ ಸಂಧಿಗ್ಧ ಪರಿಸ್ಥಿತಿಯಲ್ಲಿ ಜನರ ನೋವಿಗೆ ಎಷ್ಟರ ಮಟ್ಟಿಗೆ ಸ್ಪಂಧನೆ ನೀಡಿದ್ದೀರಿ ಎನ್ನುವುದನ್ನು ತೋರಿಸಿ ಕೊಡಬೇಕೆಂದು ಸವಾಲು ಹಾಕಿದರು.

ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಉಲ್ಬಣವಾಗುತ್ತಲೇ ಇವೆ. ಆಕ್ಸಿಜನ್, ಬೆಡ್, ಔಷಧಿಯ ಕೊರತೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬದಲಾಗಿ, ಕಾಮಗಾರಿಗಳ ಪರಿಶೀಲನೆ, ಅಧಿಕಾರಿಗಳ ಸಭೆ ಸೇರಿ ಇತರೆ ಕೋವಿಡ್ ನಿಯಮ ಉಲ್ಲಂಘನೆ ಮಾಡುವ ಕೆಲಸಗಳನ್ನು ಮಾಡುತ್ತಾ ಸಾಮಾಜಿಕ ಅಂತರವಿಲ್ಲದೇ ಬೆಂಬಲಿಗರೊಂದಿಗೆ ಓಡಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಕ್ಷೇತ್ರದ ಶಾಸಕರಾಗಿ ಅಭಿವೃದ್ಧಿಯ ಬಗ್ಗೆ ಹೇಳಲಿ. ಅದು ಬಿಟ್ಟು ವಯಕ್ತಿಕವಾಗಿ ನಿಂದನೆ ಮಾಡಿದರೆ, ನಮಗೂ ಮಾತಾಡಲು ಬರುತ್ತೆ. ಆದರೆ, ಅನಾಗರಿಕರಂತೆ ವರ್ತನೆ ಮಾಡುವುದು ನಮ್ಮ ಘನತೆಗೆ ಶೋಭೆ ತರುವುದಿಲ್ಲ ಎಂದು ಕುಟುಕಿದರು.

ಈಗಾಗಲೇ ಕೇಂದ್ರ ಸರಕಾರ 9500 ಕೋಟಿ ರೂಪಾಯಿಯನ್ನು ರೈತರ ಖಾತೆಗೆ ಜಮಾ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಬಡವರು ಹಸಿವೆಯಿಂದ ಇರಬಾರದೆಂದು ರಾಜ್ಯ ಮತ್ತು ಕೇಂದ್ರ ಸರಕಾರಗಳು ಸಹಾಯ, ಸಹಕಾರ ನೀಡುತ್ತಾ ಬರುತ್ತಿವೆ. ಬಿಜೆಪಿಯ ಜನಪರ ಕಾರ್ಯಗಳನ್ನು ಅರಗಿಸಿಕೊಳ್ಳಲಾಗದೇ ಕಾಂಗ್ರೆಸ್ಸಿಗರು ವೃಥಾ ಟೀಕೆಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿರುವುದು ಖೇದಕರ ಎಂದರು.

Leave a Reply

Your email address will not be published. Required fields are marked *

error: Content is protected !!