ಕೋವಿಡ್ ಎರಡನೇ ಅಲೆ : ಕಟ್ಟುನಿಟ್ಟಾಗಿ ನಿಯಮ ಪಾಲನೆಗೆ ಸೂಚನೆ
ಲಿಂಗಸೂಗೂರು : ರಾಜ್ಯದಲ್ಲಿ ಕೋವಿಡ್ ಮಹಾಮಾರಿಯ ಎರಡನೇ ಅಲೆಯ ಅಪಾಯದ ಗಂಟೆ ಬಾರಿಸುತ್ತಿದ್ದು, ಇದನ್ನು ನಿಯಂತ್ರಿಸಲು ಸರಕಾರ ಆದೇಶಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಹಸೀಲ್ದಾರ್
ಚಾಮರಾಜ ಪಾಟೀಲ್ ಸೂಚನೆ ನೀಡಿದರು.
ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಕೋವಿಡ್-19
ಮುನ್ನೆಚ್ಚರಿಕೆ ಕ್ರಮಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಕೊರೊನಾ ಮಹಾಮಾರಿಯ ಎರಡನೇ ಅಲೆಯ ಅಬ್ಬರ ಕಾಣಿಸಿಕೊಳ್ಳುತ್ತಿದೆ.ಮುಂಜಾಗೃತೆ ಕ್ರಮವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು ಎಂದರು. ನೆರೆಹೊರೆಯ ರಾಜ್ಯಗಳಿಂದ ಆಗಮಿಸುವ ಜನರ ಬಗ್ಗೆ
ತಿಳಿದುಬಂದರೆ ಕೂಡಲೇ ತಾಲೂಕಾಡಳಿತಕ್ಕೆ ಮಾಹಿತಿ ನೀಡಬೇಕು.
ಈಗಾಗಲೇ ತಾಲೂಕು ಗಡಿಗಳಲ್ಲಿ ಚೆಕ್‍ಪೋಸ್ಟ್‍ಗಳನ್ನು
ಆರಂಭಿಸಲಾಗಿದೆ. ಕಡ್ಡಾಯವಾಗಿ ಕೊವೀಡ್ ನೆಗೆಟಿವ್ ವರದಿ ಪಡೆಯಲು ಸೂಚನೆ ನೀಡಲಾಗಿದೆ. ದಿನನಿತ್ಯದ ಪರೀಕ್ಷೆಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೊರೊನಾ ಎರಡನೇ ಅಲೆ ತಡೆಗೆ ಮದುಗೆ ಸಮಾರಂಭಗಳಿಗೆ 200-500 ಜನ, ಜನ್ಮದಿನ, ಮರಣ, ಶವಸಂಸ್ಕಾರಗಳಿಗೆ 50-100 ಜನ, ಧಾರ್ಮಿಕ ಆಚರಣೆ, ರಾಜಕೀಯ ಸಭೆ-ಸಮಾರಂಭಗಳಿಗೆ 500 ಜನಕ್ಕೂ ಮೀರಿ
ಸೇರದಂತೆ ಸರಕಾರ ಸುತ್ತೋಲೆ ಹೊರಡಿಸಿದ್ದು, ಇದನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ ಎಂದರು.
ತಾಲೂಕಿನ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ 16
ಕೇಂದ್ರಗಳಲ್ಲಿ ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ 4 ಗಂಟೆವರೆಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ.ಈಗಾಗಲೇ ತಾಲೂಕಿನಲ್ಲಿ 4 ಸಾವಿರಕ್ಕೂ ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. 45 ವರ್ಷ ಮೇಲ್ಪಟ್ಟವರು, ಸಕ್ಕರೆ
ಕಾಯಿಲೆ, ರಕ್ತದ ಒತ್ತಡ, ಹೃದಯ ಕಾಯಿಲೆ ಇರುವವರೂ ಲಸಿಕೆ ಪಡೆಯಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ ಎಂದು ಆರೋಗ್ಯ ಇಲಾಖೆಯ ವ್ಯವಸ್ಥಾಪಕ ಪ್ರಾಣೇಶ್ ಜೋಶಿ ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ, ಪಿಎಸ್‍ಐ ಪ್ರಕಾಶರೆಡ್ಡಿ ಡಂಬಳ್, ಪುರಸಭೆ ಸದಸ್ಯರಾದ ಯಮನಪ್ಪ ದೇಗಲಮಡಿ,ದೊಡ್ಡನಗೌಡ ಹೊಸಮನಿ, ಬಾಬುರೆಡ್ಡಿ ಮುನ್ನೂರು, ಮುದುಕಪ್ಪ ನಾಯಕ, ಮುತ್ತು ಮೇಟಿ, ಮೌಲಾಸಾಬ ಗೌಳಿ, ಚನ್ನಬಸವ ಹಿರೇಮಠ ಸೇರಿ
ಇತರರು ಸಭೆಯಲ್ಲಿ ಇದ್ದರು.

