ಬೆಂಡೋಣಿ ಗ್ರಾಮದ ಶಾಲಾ ಮಕ್ಕಳಿಗೆ ಮಾಸ್ಕ್ ವಿತರಣೆ
ಲಿಂಗಸುಗೂರು : ತಾಲೂಕಿನ ಬೆಂಡೋಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 6 ಮತ್ತು 7ನೇ ವರ್ಗದ ಮಕ್ಕಳಿಗೆ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದಿಂದ ಎನ್-95 ಗುಣಮಟ್ಟದ ಮಾಸ್ಕ್‍ಗಳನ್ನು ವಿತರಣೆ ಮಾಡಲಾಯಿತು.
ಪ್ರತಿಷ್ಠಾನವು ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅನೇಕ ವರ್ಷಗಳಿಂದ ಮೊಬೈಲ್ ಲ್ಯಾಬ್ ಮೂಲಕ ವಿಜ್ಞಾನ ಹಾಗೂ ಗಣಿತದ ಪಾಠಗಳನ್ನು ಮಾಡುತ್ತಾ ಬಂದಿದೆ. ಇದರಿಂದ ಹಲವು ಶಾಲೆಗಳಲ್ಲಿ ಪ್ರಯೋಗಾಲಯದ ಕೊರತೆ ನೀಗಿದೆ. ಲಾಕ್‍ಡೌನ್ ಪರಿಸ್ಥಿತಿಯಲ್ಲೂ ಶೈಕ್ಷಣಿಕ ಅಭಿವೃದ್ಧಿ ಕುಂಟಿತ ಆಗಬಾರದೆಂದು ಆನ್‍ಲೈನ್ ಮೂಲಕ ಪಾಠ ಬೋಧನೆಯನ್ನು ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್‍ಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಚಂದ್ರೇಗೌಡರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಶಾಲಾ ಮಕ್ಕಳಿಗೆ ಮಾಸ್ಕ್ ನೀಡಿದಂತೆ ತಾಲೂಕಿನ ಉಳಿದ ಸರಕಾರಿ ಶಾಲಾ ಮಕ್ಕಳಿಗೂ ಪ್ರತಿಷ್ಠಾನದ ವತಿಯಿಂದ ಮಾಸ್ಕ್‍ಗಳನ್ನು ನೀಡುವಂತೆ ವಿಜ್ಞಾನ ಶಿಕ್ಷಕ ಚಂದ್ರು ಮನವಿ ಮಾಡಿದರು.
ಮುಖ್ಯಶಿಕ್ಷಕ ಪರಮಣ್ಣ, ನಾಗೇಂದ್ರ ಪಾಟೀಲ್, ಶಿವಪ್ಪ, ಶಿವಾನಂದ, ಹುಸೇನ್ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

