ಲಿಂಗಸುಗೂರು ಕೋವಿಡ್ ಕೇರ್ ಸೆಂಟರ್‍ಗೆ ಜಿಲ್ಲಾಧಿಕಾರಿ ಭೇಟಿ : ಪರಿಶೀಲನೆ
ಲಿಂಗಸುಗೂರು : ಸ್ಥಳೀಯ ಸರಕಾರಿ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‍ಗೆ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಆಸ್ಪತ್ರೆಯಲ್ಲಿ 80 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಸಧ್ಯಕ್ಕೆ 32 ಜನ ಆಕ್ಸಿಜನ್ ಬೆಡ್‍ಗಳ ಮೇಲಿದ್ದಾರೆ. ಆಕ್ಸಿಜನ್ ಕೊರತೆ ಇಲ್ಲ. ರಾಯಚೂರಿನಿಂದ ರೀಫಿಲ್ಲಿಂಗ್ ಮಾಡಿ ಕಳುಹಿಸಲಾಗುತ್ತಿದೆ. ವೆಂಟಿಲೇಟರ್ ಅಗತ್ಯ ಬಿದ್ದರೆ ಮೂರು ದಿನಗಳ ಬಳಿಕ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ಔಷಧಗಳ ಕೊರತೆಯೂ ಸಧ್ಯಕ್ಕೆ ಇಲ್ಲ. ಸಾರ್ವಜನಿಕರ ಆರೋಗ್ಯದ ಹಿತರಕ್ಷಣೆ ಹಿನ್ನೆಲೆಯಲ್ಲಿ ಯಾರಾದರೂ ನಿವೃತ್ತ ವೈದ್ಯರು ಸೇವೆ ಸಲ್ಲಿಸಲು ಅರ್ಜಿ ಕೊಟ್ಟರೆ ಸಾಕು ತುರ್ತಾಗಿ ಅವರನ್ನು ಸೇವೆಗೆ ಸೇರಿಸಿಕೊಳ್ಳಲಾಗುವುದು ಎಂದರು.
ಕೇಂದ್ರ ಸರಕಾರದ ಹೊಸ ಮಾರ್ಗಸೂಚಿಯಂತೆ ಮೊದಲ ಡೋಸ್ ಹಾಕಿಸಿಕೊಂಡ ವ್ಯಕ್ತಿಯು 12 ವಾರದ ಅಂತರದಲ್ಲಿ ಎರಡನೇ ಡೋಸ್ ಹಾಕಿಸಿಕೊಳ್ಳಬೇಕು. ಬೇಡಿಕೆಗೆ ತಕ್ಕಂತೆ ವ್ಯಾಕ್ಸಿನ್‍ಗಳ ಪೂರೈಕೆ ಆಗುತ್ತಿಲ್ಲ. ಆನ್‍ಲೈನ್‍ನಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ನೋಂದಣೆ ಮಾಡಬೇಕು. ವೃಥಾ ನೂರಾರು ಜನ ನಿತ್ಯ ಬಂದು ವ್ಯಾಕ್ಸಿನ್‍ಗೆ ನಿಲ್ಲುವುದು ಬೇಡ. ನೋಂದಣೆಯ ಬಳಿಕ ಮೊಬೈಲ್‍ಗೆ ಮೆಸೆಜ್ ಬರುತ್ತೆ. ಅಂಥವರು ಮಾತ್ರ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬರಬೇಕು ಎಂದರು. ಇದು ಉಪವಿಭಾಗದ ಆಸ್ಪತ್ರೆಯಾಗಿದ್ದು ಅತ್ಯಾಧುನಿಕ ಯಂತ್ರೋಪಕರಣಗಳಿವೆ. ಆದರೆ, ತಜ್ಞ ವೈದ್ಯರ ಕೊರತೆ ಇದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಜ್ಞರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸಹಾಯಕ ಆಯುಕ್ತ ರಾಜಶೇಖರ ಡಂಬಳ್, ತಹಸೀಲ್ದಾರ್ ಚಾಮರಾಜ ಪಾಟೀಲ್, ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ್, ತಾ.ಪಂ. ಇಒ ಲಕ್ಷ್ಮಿದೇವಿ, ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

