ನಾಟೌಟ್ 100 : ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಲಿಂಗಸುಗೂರು : ಇಂಧನ ದರ ಏರಿಕೆ ವಿರೋಧಿಸಿ ರಾಜ್ಯವ್ಯಾಪಿ ಕಾಂಗ್ರೆಸ್ ಪಕ್ಷದಿಂದ ಆರಂಭವಾಗಿರುವ ನಾಟೌಟ್ 100 ಐದು ದಿನಗಳ ಪ್ರತಿಭಟನೆಯ ಆರಂಭದ ದಿನವಾದ ಶುಕ್ರವಾರ ಪಕ್ಷದ ಕಾರ್ಯಕರ್ತರು ಸ್ಥಳೀಯ ಪೆಟ್ರೋಲ್ ಬಂಕ್‍ಗಳಲ್ಲಿ ಪ್ರತಿಭಟನೆ ನಡೆಸಿದರು.
ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ ಅವರ ಸರಕಾರ ಒಂದು ರೂಪಾಯಿ ಬೆಲೆ ಏರಿಕೆ ಮಾಡಿದರೂ ಬಿಜೆಪಿಯವರು ಹಾಹಾಕಾರ ಮಾಡುತ್ತಿದ್ದರು. ಖುದ್ದು ಇಂದಿನ ಪ್ರಧಾನಿ ಮೋದಿಯವರೇ ವಿರೋಧ ವ್ಯಕ್ತಪಡಿಸುತ್ತಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ, ಅಚ್ಛೇ ದಿನ್ ಆಯೇಂಗೆ ಎಂದು ಅಮಾಯಕ ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದ ಬಳಿಕ ದೇಶವನ್ನು ಕೊಳ್ಳೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದ ಯುವ ಘಟಕದ ಮುಖಂಡರು, ಬೆಲೆ ಏರಿಕೆ ನಿಯಂತ್ರಣ ಮಾಡುವಂತೆ ಒತ್ತಾಯಿಸಿದರು.
ಪುರಸಭೆ ಸದಸ್ಯ ಮುತ್ತು ಮೇಟಿ, ಕಾಂಗ್ರೆಸ್ ಯುವ ಘಟಕದ ಮುಖಂಡರಾದ ಎಂ.ಜಿಲಾನಿ, ಹನುಮಂತ ನಾಯಕ, ವಸೀಂಪಾಷಾ, ಬಸವರಾಜ, ಅಸ್ಲಂಪಾಷಾ ಹಟ್ಟಿ, ಶರಣಬಸವ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು

