100ಕ್ಕೇರಿದ ಪೆಟ್ರೋಲ್ : ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ
ಲಿಂಗಸುಗೂರು : 100 ರೂಪಾಯಿಗೆ ಏರಿಕೆ ಕಂಡಿರುವ ಪೆಟ್ರೋಲ್ ಬೆಲೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಶಾಸಕ ಡಿ.ಎಸ್.ಹೂಲಗೇರಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸ್ಥಳೀಯ ಪೆಟ್ರೋಲ್ ಬಂಕ್ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಐದು ದಿನಗಳ ಕಾಲ ಪಟ್ಟಣ, ಹೋಬಳಿ, ಗ್ರಾಮಗಳಲ್ಲಿ ಹಂತ ಹಂತವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ಗಾಯದ ಮೇಲೆ ಬರೆ ಎಂಬಂತೆ ಕೇಂದ್ರ ಸರಕಾರ ಇಂಧನ ಬೆಲೆ ಏರಿಕೆ ಮಾಡಿರುವುದು ಜನಸಾಮಾನ್ಯರ ಮೇಲೆ ಬಿಜೆಪಿ ಪಕ್ಷದ ಕಾಳಜಿ ಎಷ್ಟಿದೆ ಎಂದು ತೋರಿಸುತ್ತದೆ. ಕೊರೋನಾ ಮಹಾಮಾರಿ ಜನರನ್ನು ಕಂಗೆಡಿಸಿ ಜೀವನವನ್ನು ದುಸ್ಥರವಾಗಿಸಿದೆ. ಅಲ್ಲದೇ ಸಾವಿರಾರು ಜನ ತಮ್ಮ ಪ್ರಾಣವನ್ನು ಕಳೆದುಕೊಂಡು ಕುಟುಂಬಗಳು ಬೀದಿ ಪಾಲಾಗಿವೆ. ಇಂತಹ ಸಂದರ್ಭದಲ್ಲಿ ಇಂಧನ ಬೆಲೆಗಳನ್ನು ಏರಿಸಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ವಿದ್ಯುತ್, ಪೆಟ್ರೋಲ್, ಡಿಸೇಲ್ ಸೇರಿದಂತೆ ಅವಶ್ಯಕ ವಸ್ತುಗಳ ಬೆಲೆಯನ್ನು ಏರಿಸಿರುವುದು ಖಂಡನೀಯವಾಗಿದೆ ಎಂದು ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಶಾಸಕ ಡಿ.ಎಸ್.ಹೂಲಗೇರಿ ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ನಿಯಮ ಉಲ್ಲಂಘನೆ
ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಇನ್ನೂ ನಿಯಂತ್ರಣಕ್ಕೆ ಬಾರದೇ ಇರುವ ಕಾರಣ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಪ್ರತಿಭಟನೆಯ ವೇಳೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವ ಘಟನೆ ಜರುಗಿದೆ. ನಿಯಮದ ಪ್ರಕಾರ ಜನರು ಗುಂಪುಗುಂಪಾಗಿ ಸೇರಬಾರದು, ಮಾಸ್ಕ್ ಧರಿಸಬೇಕೆಂಬ ನಿಯಮವಿದೆ. ಆದರೆ ಇಂದಿನ ಪ್ರತಿಭಟನೆಯಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ಕೆಪಿಸಿಸಿ ಕಾರ್ಯದರ್ಶಿ ಶರಣಗೌಡ ಬಯ್ಯಾಪೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್, ಶರಣಪ್ಪ ಮೇಟಿ, ಪಾಮಯ್ಯ ಮುರಾರಿ ಸೇರಿ ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು.

