ಕಳ್ಳತನದ ಸಾಮಗ್ರಿ ಮಾರಾಟ ಮಾಡುತ್ತಿದ್ದ ಯುವಕ ಪತ್ರಕರ್ತನೆಂದು ಹೇಳಿಕೊಳ್ಳುತ್ತಿದ್ದ..! ಯುವಕ ಬಂಧನ : 70 ಸಾವಿರ ರೂಪಾಯಿ ಮೌಲ್ಯದ ಸಾಮಗ್ರಿ ಜಪ್ತಿ
ಲಿಂಗಸುಗೂರು : ತಾನೊಬ್ಬ ಪತ್ರಕರ್ತನೆಂದು ಹೇಳಿಕೊಂಡು ಪಟ್ಟಣದಲ್ಲಿ ಓಡಾಡುತ್ತಿದ್ದ ಯುವಕನೋರ್ವನನ್ನು ಪೋಲಿಸರು ಬಂಧಿಸಿ ಆತನಿಂದ 70 ಸಾವಿರ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡ ಘಟನೆ ಶನಿವಾರ ಜರುಗಿದೆ.
ಇತ್ತೀಚೆಗೆ ಪಟ್ಟಣದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ಗಳ ಪೆಟ್ರೋಲ್, ಸೀಟ್, ಟಯರ್, ಫ್ಯೂಯೆಲ್ ಟ್ಯಾಂಕ್ ಕಳ್ಳತನ ಮಾಡಿ ಈತನಿಗೆ ಮೂವರು ಬಾಲಕರು ಮಾರಾಟ ಮಾಡುತ್ತಿದ್ದರು. ಕಳುವಿನ ಸಾಮಗ್ರಿಗಳನ್ನು ಮುತ್ತು ಪಾಟೀಲ್ ಎನ್ನುವ ಮೆಕ್ಯಾನಿಕ್ ಖರೀದಿಸಿ ಬೇರೆ ಬೈಕ್‍ಗಳಿಗೆ ಜೋಡಿಸಿ ಮಾರಾಟ ಮಾಡುತ್ತಿದ್ದ. ಈತನಿಂದ 2 ಬೈಕ್, 2 ಸೀಟ್ ಕವರ್, 2 ಫ್ಯುಯೆಲ್ ಟ್ಯಾಂಕ್, 5 ವೀಲ್, 2 ಬ್ಯಾಟರಿ, ಪಾನರ್‍ಗಳು ಸೇರಿ ಸುಮಾರು 70 ಸಾವಿರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈತನಿಗೆ ಬೈಕ್ ಕದ್ದು ಮಾರಾಟ ಮಾಡುತ್ತಿದ್ದ ಕಳ್ಳರ ಪತ್ತೆ ಕಾರ್ಯ ನಡೆದಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ. ಪತ್ರಕರ್ತನೆಂದು ಹೇಳಿಕೊಂಡು ಓಡಾಡುತ್ತಿದ್ದ ಮುತ್ತು ಪಾಟೀಲ್ ಕೆಲವು ಪತ್ರಕರ್ತರೊಂದಿಗೆ ಓಡಾಡುತ್ತಿದ್ದ ಎನ್ನುವ ಮಾತುಗಳು ಪಟ್ಟಣದಲ್ಲಿ ಕೇಳಿ ಬರುತ್ತಿವೆ. ಈ ಬಗ್ಗೆ ಪೋಲಿಸರು ಹೆಚ್ಚಿನ ತನಿಖೆ ನಡೆಸಿದಾಗ ಸತ್ಯಾಸತ್ಯತೆ ಹೊರಬೀಳಲಿದೆ.
ಡಿವೈಎಸ್‍ಪಿ ಮಾರ್ಗದರ್ಶನ, ಸಿಪಿಐ ನೇತೃತ್ವದಲ್ಲಿ, ಪಿಎಸ್‍ಐ ಪ್ರಕಾಶರೆಡ್ಡಿ ತಂಡವು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

