ನಿಯಮ ಉಲ್ಲಂಘಿಸಿ ಕೇಬಲ್ ಅಳವಡಿಕೆ : ಏರ್‍ಟೆಲ್ ಕಂಪನಿ ವಿರುದ್ಧ ದೂರು..!
ಲಿಂಗಸುಗೂರು : ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಏರ್‍ಟೆಲ್ ಕಂಪನಿಯು ಕೇಬಲ್ ಹಾಕುವ ನೆಪದಲ್ಲಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ಪಕ್ಕದಲ್ಲಿಯೇ ಗುಂಡಿ ಅಗೆಯುತ್ತಿದ್ದಾರೆ. ಕೂಡಲೇ ಏರ್‍ಟೆಲ್ ಕೇಬಲ್ ಟೆಲೆಸೋನಿಕ್ ನೆಟ್ವಕ್ರ್ಸ್ ಲಿ.ಬೆಂಗಳೂರು ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಯದೇವ್ ಮೋತೆ ಅವರು ಠಾಣೆಗೆ ದೂರು ಸಲ್ಲಿಸಿದ್ದಾರೆ.
ಲಿಂಗಸುಗೂರು ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಲಿಂಗಸುಗೂರು-ಅಮರೇಶ್ವರ ವಯಾ ಕಾಳಾಪೂರ, ಗುಂತಗೋಳ ರಸ್ತೆ 00 ದಿಂದ 11 ಕಿ.ಮೀ. ಹಾಗೂ 11 ರಿಂದ 25 ಕಿ.ಮೀ.ವರೆಗಿನ ರಸ್ತೆಯಲ್ಲಿ ಏರ್‍ಟೆಲ್ ಕೇಬಲ್ ಟೆಲೆಸೋನಿಕ್ ನೆಟ್ವಕ್ರ್ಸ್ ಲಿ, ಬೆಂಗಳೂರು ಇವರು ನಿಯಮವನ್ನು ಉಲ್ಲಂಘಿಸಿ ರಾತ್ರಿವೇಳೆ ರಸ್ತೆಯ ಡಾಂಬರಿನ ಅಂಚಿಗೆ ಹೊಂದಿಕೊಂಡು ಅಗೆಯುತ್ತಿದ್ದಾರೆ. ಅಗೆದ ಮಣ್ಣನ್ನು ಡಾಂಬರ್ ರಸ್ತೆಯ ಮೇಲೆ ಹಾಕುತ್ತಿದ್ದಾರೆ.
ಇದರಿಂದ ಸಾರ್ವಜನಿಕರಿಗೆ ಹಾಗೂ ಸರಕಾರಿ ರಸ್ತೆಗೆ ಅಪಾರವಾದ ಹಾನಿಯಾಗುತ್ತಿದೆ. ಅಲ್ಲದೇ ರಸ್ತೆ ಅಪಘಾತಗಳೂ ಉಂಟಾಗುವ ಸಂಭವ ಹೆಚ್ಚಾಗಿದೆ. ಈ ಬಗ್ಗೆ ಈಗಾಗಲೇ ದೂರು ಸಲ್ಲಿಸಿದಾಗ್ಯೂ ಪೋಲಿಸರು ಕ್ರಮಕ್ಕೆ ಮುಂದಾಗಿಲ್ಲ. ಇನ್ನಾದರೂ ತಡಮಾಡದೇ ಸಂಬಂಧಿಸಿದವರ ಮೇಲೆ ಕಾನೂನು ರೀತ್ಯ ಕ್ರಮಕ್ಕೆ ಮುಂದಾಗಬೇಕೆಂದು ಎಇಇ ದೂರಿನಲ್ಲಿ ಮನವಿ ಮಾಡಿದ್ದಾರೆ.
ಸರಕಾರಿ ರಸ್ತೆಗೆ ಹಾನಿಯುಂಟು ಮಾಡುತ್ತಿರುವ ಕಂನಿಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವಲ್ಲಿ ಪೋಲಿಸರು ವಿಳಂಬ ಮಾಡುತ್ತಿರುವುದಾದರೂ ಯಾಕೆ ಎನ್ನುವ ಪ್ರಶ್ನೆಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿವೆ.

