ರಾಯಚೂರು

ಲಿಂಗಸುಗೂರಲ್ಲಿ ಮನೆ ಮಾಡಿದ ಮಾಜಿಸಚಿವ ಹನುಮಂತಪ್ಪ ಆಲ್ಕೋಡ್..! ಗರಿಗೆದರಿದ ಕುತೂಹಲ : ರಾಜಕೀಯ ದೃವೀಕರಣದ ಮುನ್ಸೂಚನೆಯೇ..?

ಖಾಜಾಹುಸೇನ್
ಲಿಂಗಸುಗೂರು : ಹಾಲಿ-ಮಾಜಿ ಶಾಸಕರುಗಳ ಮುಸುಕಿನ ಗುದ್ದಾಟದ ಮಧ್ಯೆ ಜನಪರ ಕಾಳಜಿ ಹೊಂದಿದ ನನಾನುರಾಗಿ ನಾಯಕ ಎಂದೇ ಗುರುತಿಸಿಕೊಂಡಿರುವ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್‍ರು ಅಚಾನಕ್ಕಾಗಿ ಲಿಂಗಸುಗೂರು ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿ, ಅದರ ಗೃಹ ಪ್ರವೇಶ ಮಾಡುವ ಮೂಲಕ ತಾಲೂಕಿನಲ್ಲಿ ರಾಜಕೀಯ ದೃವೀಕರಣಕ್ಕೆ ಮುನ್ಸೂಚನೆ ನೀಡುತ್ತಿದ್ದಾರೆಯೇ..? ಪ್ರಶ್ನೆ ಜನರಲ್ಲಿ ಮೂಡತೊಡಗಿದೆ.


ಜೆಡಿಎಸ್ ಪಕ್ಷದ ವರಿಷ್ಠ ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಆಲ್ಕೋಡ್ ದಶಕಗಳ ಕಾಲ ಆ ಪಕ್ಷದಲ್ಲಿಯೇ ಇದ್ದ ಅನುಭವಿಕರು. ರಾಜಕೀಯ ಮೇಲಾಟದಲ್ಲಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಕಾಂಗ್ರೆಸ್ ಪಕ್ಷಕ್ಕಾಗಿ ಕ್ಷೇತ್ರದಲ್ಲಿ ಹಗಲಿರುಳು ಶ್ರಮಿಸಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೂ ಕಾರಣರಾದರು. ಬಳಿಕ ತಾತ್ಕಾಲಿಕವಾಗಿ ತೆರೆಯ ಹಿಂದೆ ಸರಿದಿದ್ದ ಆಲ್ಕೋಡ್, ಪುನಃ ಲಿಂಗಸುಗೂರು ಕ್ಷೇತ್ರದತ್ತ ಒಲವು ತೋರುತ್ತಿರುವುದು ಮಾತ್ರ ಬರುವ ದಿನಗಳಲ್ಲಿ ರಾಜಕೀಯ ಬದಲಾವಣೆಗೆ ನಾಂದಿ ಹಾಡುತ್ತಾ ಎನ್ನುವ ಕುತೂಹಲ ಜನರಲ್ಲಿದೆ.


ಈಗಾಗಲೇ ಪಕ್ಕದ ದೇವದುರ್ಗ ಮತಕ್ಷೇತ್ರದಲ್ಲಿ ಎಮ್‍ಎಲ್‍ಸಿಯಾಗಿ ಶಾಸಕ, ಸಚಿವರಾಗಿ ಕೆಲಸ ನಿರ್ವಹಿಸಿರುವ ಅನುಭವ ಹೊಂದಿರುವ ಆಲ್ಕೋಡ್ ಅವರಿಗೆ ಜನರ ಮಿಡಿತ, ತುಡಿತದ ಅರಿವಿದೆ. ಪದವೀಧರರೂ ಆಗಿರುವ ಆಲ್ಕೋಡ್ ಕಾನೂನು ವಿದ್ಯಾರ್ಥಿಯೂ ಆಗಿರುವುದು ಅವರಿಗೆ ಸರಕಾರದ ನಾನಾ ಯೋಜನೆಗಳು, ಅನುದಾನಗಳ ಬಗ್ಗೆ ಆಳವಾದ ಮಾಹಿತಿ ಇರುವುದಂತೂ ಸುಳ್ಳಲ್ಲ. ಸರಳ ವ್ಯಕ್ತಿತ್ವದ ಮನುಷ್ಯನೆಂದೇ ಕರೆಯಲ್ಪಡುವ ಆಲ್ಕೋಡ್ ಹನುಮಂತಪ್ಪನವರು ಯಾವುದೇ ಹಮ್ಮು ಬಿಮ್ಮು ತೋರದೇ ಸರಳತೆಯಿಂದಲೇ ಜನರೊಂದಿಗೆ ಪಾದರಸದಂತೆ ಬೆರೆಯುವ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದಾರೆ. ಮಸ್ಕಿ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಆಲ್ಕೋಡ್ ಅವರು ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡು ಹೆಚ್ಚಿನ ಬಹುಮತದಿಂದ ಆಯ್ಕೆಯಾಗಲು ಕಾರಣರಾದವರಲ್ಲಿ ಇವರೂ ಒಬ್ಬರು ಎನ್ನಬಹುದಾಗಿದೆ.


ಲಿಂಗಸುಗೂರು ಪಟ್ಟಣದಲ್ಲಿ ಮಾಜಿ ಸಚಿವರು ಮನೆ ಮಾಡಿರುವುದು ಮತ್ರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾಗ್ಯೂ, ಕಾಂಗ್ರೆಸ್ ಪಕ್ಷದಲ್ಲಿಯ ಒಳ ಬೇಗುದಿಗೆಗೆ ಇದು ಪುಷ್ಠೀಕರಿಸುವಂತೆ ಕಾಣುತ್ತಿದೆ. ಆಲ್ಕೋಡ್‍ರ ದೊಡ್ಡ ಅಭಿಮಾನಿ ಬಳಗವೇ ತಾಲೂಕಿನಲ್ಲಿದೆ. ಪಕ್ಷಾತೀತವಾಗಿ ಇವರನ್ನು ಬೆಂಬಲಿಸುವ ಒಂದು ವರ್ಗವೂ ಸದಾ ಇವರ ಜೊತೆಗಿರುತ್ತದೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿರುವ ಜೆಡಿಎಸ್‍ನ ಸಿದ್ದು ಬಂಡಿ, ಬಿಜೆಪಿಯ ಮಾನಪ್ಪ ವಜ್ಜಲ್‍ರು ಮುಂದಿನ ಬಾರಿ ಕ್ಷೇತ್ರದಲ್ಲಿ ಶತಾಯಗತಾಯ ಜಯಗಳಿಸಲು ಈಗಾಗಲೇ ಪ್ಲಾನ್ ಮಾಡಿಕೊಳ್ಳುತ್ತಿರುವುದು ಗುಟ್ಟಾದ ವಿಷಯವೇನಲ್ಲ. ಇಬ್ಬರ ಮಧ್ಯೆ ಮೂರನೆಯವರಿಗೆ ಲಾಭ ಎನ್ನುವಂತೆ ಮಾಜಿ ಮಂತ್ರಿ ಆಲ್ಕೋಡ್ ಅವರು ಪ್ರತ್ಯೇಕವಾಗಿ ಮನೆ ಮಾಡಿ ಗೃಹ ಕಚೇರಿಯನ್ನು ಆರಂಭಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!