ಲಾಕ್‍ಡೌನ್ ಸಡಿಲಿಕೆ : ನಸುಕಿನಲ್ಲೇ ಎಣ್ಣೆದಾಸರು ಹಾಜರ್.. ನೂಕುನುಗ್ಗಲು..!
ಖಾಜಾಹುಸೇನ್
ಲಿಂಗಸುಗೂರು : ಕೋವಿಡ್ ಲಾಕ್‍ಡೌನ್ ಸೋಮವಾರ ಮಧ್ಯಾಹ್ನದ ವರೆಗೆ ಸಡಿಲಿಕೆ ಮಾಡಿದ್ದರ ಪರಿಣಾಮ, ಪಟ್ಟಣದಲ್ಲಿರುವ ಬಹುತೇಕ ಬಾರ್‍ಶಾಪ್‍ಗಳ ಮುಂದೆ ಎಣ್ಣೆದಾಸರು ನಸುಕಿನಿಂದಲೇ ಹಾಜರಾಗಿದ್ದರು. ಹೆಚ್ಚಿನ ಪ್ರಮಾಣದಲ್ಲಿ ವ್ಯಸನಿಗಳು ಸೇರಿದ್ದರಿಂದ ಬಾಟಲಿಗಳನ್ನು ಪಡೆಯಲು ನೂಕುನುಗ್ಗಲು ಅನುಭವಿಸುವಂತಾಯಿತು.
ಅಜ್ಜಿಗೆ ಮೊಮ್ಮಗಳ ಚಿಂತೆಯಾದರೆ, ಮೊಮ್ಮಗಳಿಗೆ ಮತ್ಯಾರದ್ದೋ ಚಿಂತೆ ಎನ್ನುವಂತೆ ಸಂಸಾರ ನೌಕೆಯನ್ನು ಸಾಗಿಸಲು ಮನೆಯಲ್ಲಿನ ಹೆಣ್ಣುಮಕ್ಕಳು ಹರಸಾಹಸ ಪಡುತ್ತಿರುವುದು ಒಂದೆಡೆಯಾದರೆ, ಎಣ್ಣೆದಾಸಲು ಮಾತ್ರ ಇದ್ಯಾವುದಕ್ಕೂ ಕೇರ್ ಮಾಡದೇ ತಮಗೆ ಮಧ್ಯ ಸಿಕ್ಕರೆ ಸಾಕು, ತ್ರಿಲೋಕವೇ ತನ್ನ ಮುಷ್ಠಿಯೊಳಗೆ ಎನ್ನುವಷ್ಟರ ಮಟ್ಟಿಗೆ ಮೈಮರೆತು ಬಾಟಲಿಗಳನ್ನು ಕೊಳ್ಳಲು ಮುಗಿಬಿದ್ದಿದ್ದರು.
ಮೂರು ದಿನಗಳಿಂದ ಎಣ್ಣೆ ಅಂಗಡಿಗಳು ಬಂದ್ ಆಗಿರುವ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಜಮಾವಣೆ ಗೊಂಡಿದ್ದರು. ತರಕಾರಿ, ಕಿರಾಣಿ, ಹಾಲು, ಮಾಂಸ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಎಷ್ಟು ಜನ ಸೇರುತ್ತಾರೋ, ಎಣ್ಣೆ ಅಂಗಡಿಯ ಮುಂದೆ ಅದಕ್ಕಿಂತಲೂ ಕೊಂಚ ಹೆಚ್ಚಿನ ಜನರೇ ಎಣ್ಣೆ ಖರೀದಿಗೆ ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿ ಪತ್ರಿಕೆಗೆ ಕಂಡು ಬಂದಿದೆ.
ಮತ್ತೆ ಮೂರು ದಿನಗಳ ಕಾಲ ಸಂಪೂರ್ಣವಾಗಿ ಲಾಕ್‍ಡೌನ್ ಘೊಷಣೆ ಆಗಿರುವುದನ್ನು ಮನಗಂಡ ಹಲವು ಕುಡುಕರು, ಮೂರು ದಿನಗಳ ಕಾಲ ಬೇಕಾಗುವಷ್ಟು ದಾಸ್ತಾನು ಸಂಗ್ರಹಿಸಿಕೊಳ್ಳಲು ಮುಂದಾಗಿದ್ದರು. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳೂ ಬಾಟಲಿ ವ್ಯಾಪಾರಕ್ಕೆ ಒತ್ತು ನೀಡುತ್ತಿದ್ದು, ಖುದ್ದಾಗಿ ಮಹಿಳೆಯರೂ ಎಣ್ಣೆ ಕೊಳ್ಳಲು ನೂಕುನುಗ್ಗಲು ನಡೆಸಿದರು.
ಎಂಆರ್‍ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಆಸೆಯಿಂದ ಗ್ರಾಮೀಣ ಪ್ರದೇಶದ ಜನರು ಹೆಚ್ಚಿಗೆ ಕೊಂಡೊಯ್ಯುತ್ತಾರೆನ್ನುವ ಮಾತುಗಳೂ ಕೇಳಿ ಬರುತ್ತಿವೆ. ಈ ಬಗ್ಗೆ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.
ನಿಗದಿತ ಎಂಆರ್‍ಪಿ ದರಕ್ಕೆ ಮಾರಾಟ ಮಾಡುವ ಎಂಎಸ್‍ಐಎಲ್ ಅಂಗಡಿಗಳ ಮುಂದೆ ನಿಲ್ಲುವುದು ಒತ್ತಟ್ಟಿಗಿರಲಿ, ಲಾಕ್‍ಡೌನ್ ಅವಧಿಯನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕೆಲ ಬಾರ್‍ಶಾಪ್‍ಗಳು ಹೆಚ್ಚಿನ ದರಕ್ಕೆ ಸರಕನ್ನು ಮಾರಾಟ ಮಾಡುತ್ತಿದ್ದರೂ ಸಂಬಂಧಿಸಿದವರು ಕ್ಯಾರೇ ಎನ್ನದಿರುವುದು ಸೋಜಿಗದ ವಿಷಯವಾಗಿದೆ ಎಂದು ಕರವೇ ಅದ್ಯಕ್ಷ ಜಿಲಾನಿಪಾಷಾ ಅಸಮಧಾನ ವ್ಯಕ್ತಪಡಿಸಿದ್ದಾರೆ.

