ಗೆಜ್ಜಲಗಟ್ಟಾ ಪಿಡಿಓ ವರ್ಗಾವಣೆಗೆ ಸದಸ್ಯರ ಒತ್ತಾಯ
ಲಿಂಗಸುಗೂರು : ತಾಲೂಕಿನ ಗೆಜ್ಜಲಗಟ್ಟಾ ಗ್ರಾಮ ಪಂಚಾಯತ್ ಪಿಡಿಓ ಅಮರಗುಂಡಮ್ಮ ಅವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, ಪಂಚಾಯಿತಿ ಅಭಿವೃದ್ಧಿಗೆ ಮಾರಕವಾಗಿದೆ. ಕೂಡಲೇ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಬೇರೆ ಅಧಿಕಾರಿಯನ್ನು ನಿಯೋಜಿಸಬೇಕೆಂದು ಪಂಚಾಯತ್ ಸದಸ್ಯರು ಒತ್ತಾಯಿಸಿದರು.
ತಾ.ಪಂ. ಅಧಿಕಾರಿ ಮೂಲಕ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ಮನವಿ ಸಲ್ಲಿಸಿ, ಪಂಚಾಯತ್‍ಗೆ ಸದಸ್ಯರು ಚುನಾಯಿತರಾಗಿ ಆರು ತಿಂಗಳು ಕಳೆಯುತ್ತಾ ಬಂದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸುತ್ತೋಲೆಯ ಪ್ರಕಾರ ಇದುವರೆಗೆ ಕನಿಷ್ಠ 4-5 ಸಾಮಾನ್ಯ ಸಭೆಗಳು ಮತ್ತು ಒಂದು ಕೆಡಿಪಿ ಸಭೆ ನಡೆಸಬೇಕಿತ್ತು.
ಆದರೆ, ಕಾಟಾಚಾರಕ್ಕೆನ್ನುವಂತೆ ಒಂದು ಸಭೆಯನ್ನು ನಡೆಸಿದ್ದು ಬಿಟ್ಟರೆ ಪಿಡಿಓ ಅವರು ಅಭಿವೃದ್ಧಿ ವಿಷಯದಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಯಾವುದೇ ವಿಷಯ ಕೇಳಿದರೂ ಕುಂಟುನೆಪ ಹೇಳುತ್ತಾ ಕಾಲಹರಣ ಮಾಡುತ್ತಾರೆ. ಯಾವುದೇ ತೀರ್ಮಾನಗಳನ್ನು ಸದಸ್ಯರಿಗೆ ತಿಳಿಸದೇ ಪಿಡಿಓ ಹಾಗೂ ಅದ್ಯಕ್ಷರು ಏಕ ಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕೇಳಿದರೆ, ಎಲ್ಲರಿಗೂ ತಿಳಿಸಬೇಕೆಂದು ನನಗೆ ಗೊತ್ತಿರಲಿಲ್ಲ. ಎಲ್ಲವನ್ನೂ ಕೇಳಿ ಮಾಡೋಕೆ ಆಗೊದಿಲ್ಲ ಎಂದು ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ. ಇದು ಪ್ರಜಾಪ್ರಭುತ್ವದ ವಿರೋಧ ನೀತಿಯಲ್ಲದೇ, ಪಂಚಾಯತ್‍ರಾಜ್ ಇಲಾಖೆಯ ಕಾಯ್ದೆಯ ಉಲ್ಲಂಘನೆಯಾಗಿದೆ.
ಗ್ರಾಮಗಳಲ್ಲಿ ಚರಂಡಿ, ನೀರು, ರಸ್ತೆ, ವಿದ್ಯುತ್ ಸೇರಿ ಮೂಲ ಸಮಸ್ಯೆಗಳು ತಾಂಡವವಾಡುತ್ತಿದ್ದರೂ, ಪಿಡಿಓ ಅವರು ಕನಿಷ್ಠ ಸಮಸ್ಯೆಗಳ ನಿವಾರಣೆಗೆ ಮುಂದಾಗುತ್ತಿಲ್ಲ. ಚುನಾಯಿತ ಸದಸ್ಯರಿಗೆ ಜನರು ಬಾಯಿಗೆ ಬಂದಂಗೆ ಬಯ್ಯುತ್ತಿದ್ದಾರೆ. ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಫಲವಾಗಿರುವ ಮತ್ತು ಅಭಿವೃದ್ಧಿಗೆ ಮಾರಕವಾಗಿರುವ ಪಿಡಿಓ ಅಮರಗುಂಡಮ್ಮ ಅವರು ದರ್ಪದ ಮಾತುಗಳನ್ನಾಡುವ ಮೂಲಕ ಜನರ ಜೊತೆಗೆ ವಾದಕ್ಕಿಳಿಯುತ್ತಾರೆ. ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿರುವ ಪಿಡಿಓ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ಅವರನ್ನು ನಮ್ಮ ಪಂಚಾಯಿತಿಂದ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
ಸದಸ್ಯರಾದ ರಮೇಶ ವೀರಾಪೂರ, ರಾಮಣ್ಣ ಹಿರೆಹೆಸರೂರು, ಬಸವರಾಜ ಭಜಂತ್ರಿ, ಶಾಶುಬೇಗಂ, ಯಂಕಮ್ಮ, ರುದ್ರಮ್ಮ ಗೆಜ್ಜಲಗಟ್ಟಾ, ಲಕ್ಷ್ಮಮ್ಮ ನಿಲೋಗಲ್ ಸೇರಿ ಇತರರು ಸಹಿ ಮಾಡಿದ ಮನವಿಯನ್ನು ಸಲ್ಲಿಸಿದರು.

