ಲಾಕ್‍ಡೌನ್ : ನೇಕಾರರ ಕುಟುಂಬಳಿಗೆ 10 ಸಾವಿರ ರೂ. ಪರಿಹಾರಕ್ಕೆ ಆಗ್ರಹ
ಲಿಂಗಸುಗೂರು : ಲಾಕ್‍ಡೌನ್ ಮುಂದುವರೆದಿರುವ ಪರಿಣಾಮ ಬಡ ನೇಕಾರರ ಕುಟುಂಬಗಳು ರಾಜ್ಯದಲ್ಲಿ ಜೀವನ ಸಾಗಿಸಲು ಸಂಕಷ್ಟ ಪಡುತ್ತಿವೆ. ಕೂಡಲೇ ಸರಕಾರ ಕಳೆದ ವರ್ಷ ಸಹಾಯಕ್ಕೆ ಬಂದಂತೆ ಈ ಬಾರಿಯೂ ನೇಕಾರರ ಕುಟುಂಬಗಳಿಗೆ ಆರ್ಥಿಕವಾಗಿ ತಲಾ 10 ಸಾವಿರ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೊಷಣೆ ಮಾಡಬೇಕೆಂದು ನೇಕಾರ ಸಮುದಾಯಗಳ ಒಕ್ಕೂಟದ ಅದ್ಯಕ್ಷ ಶ್ರೀಧರ ಕಿರಗಿ ಆಗ್ರಹಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ ಬಾರಿ ನೇಕಾರರ ನೆರವಿಗೆ ಬಂದಂತೆ ಈ ಬಾರಿಯೂ ಆರ್ಥಿಕ ಸಂಕಷ್ಟ ಎದರುರಿಸುತ್ತಿರುವ ವಿದ್ಯುತ್ ಮಗ್ಗ ಘಟಕ, ಫ್ಯಾಕ್ಟರಿಯಲ್ಲಿನ ನೇಕಾರರು, ಮಗ್ಗ ಪೂರ್ವ ಚಟುವಟಿಕೆಗಳಾದ ಟ್ವಿಸ್ಟಿಂಗ್, ವೈಂಡಿಂಗ್, ಯಾರನ್ ಡೈಯಿಂಗ್, ವಾರ್ಷಿಂಗ್, ವಾರ್ಪ್ ನಾಟಿಂಗ್, ಸೈಜಿಂಗ್ ಸೇರಿ ಇತರೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸುಮಾರು 1.25 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಬಡ ನೇಕಾರರ ಕುಟುಂಬಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಈ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಈಗಾಗಲೇ ನೇಕಾರ ಕುಟುಂಬಗಳಿಗೆ ಸರಕಾರ 2 ಸಾವಿರ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ, 2 ಸಾವಿರ ರೂಪಾಯಿ ಜೀವನ ನಿರ್ವಹಣೆಗೆ ಸಾಲದೇ ಇರುವ ಪರಿಣಾಮ ಕೂಡಲೇ ಸರಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನೇಕಾರ ಸಮುದಾಯದ ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಒಕ್ಕೂಟದ ಮುಖಂಡರಾದ ಮಲ್ಲಿಕಾರ್ಜುನ ವೀರಾಪೂರ, ರಾಷಪ್ಪ ಕತ್ತಿಕೈ, ಲೋಹಿತ್‍ಕುಮಾರ, ಟಿ.ರಮೇಶ, ನಾರಾಯಣ ಕೊಪ್ಪರದ, ಸಿದ್ಧರಾಮ ರುದ್ರಗಂಟಿ, ಅಮರೇಶ ಕಂಪ್ಲಿ ಸೇರಿ ಇತರರು ಇದ್ದರು.

