ನದಿಯಲ್ಲಿ ನಡೆದುಕೊಂಡು ದಡ ಸೇರಿದ ಅಧಿಕಾರಿಗಳ ತಂಡದ ಮನವಿಗೆ ಸಂತ್ರಸ್ಥರ ಸ್ಪಂದನೆ ಕೃಷ್ಣಾ ನಡುಗಡ್ಡೆಗಳಿಗೆ ಭೇಟಿ : ಸಮಸ್ಯೆಗಳ ಪರಿಹಾರಕ್ಕೆ ಭರವಸೆ
ಲಿಂಗಸುಗೂರು : ತಾಲೂಕಿನ ಗುರಗುಂಟ ಹೋಬಳಿಯ
ಯರಗೋಡಿ ಗ್ರಾಮದ ಬಳಿಯ ಕೃಷ್ಣಾ ನದಿಯ
ನಡುಗಡ್ಡೆಗಳಿಗೆ ಸಹಾಯಕ ಆಯುಕ್ತ ರಾಜಶೇಖರ ಡಂಬಳ್‍ರ ನೇತೃತ್ವದಲ್ಲಿ ಭೇಟಿ ನೀಡಿದ ಅಧಿಕಾರಿಗಳ ತಂಡ ಸಂತ್ರಸ್ಥರ ಸಮಸ್ಯೆಗಳಿಗೆ ಸ್ಪಂಧಿಸುವುದಾಗಿ ಭರವಸೆ ನೀಡುವ ಜೊತೆಗೆ ಪ್ರವಾಹ ಸಂದರ್ಭಕ್ಕಿಂತ ಮುಂಚಿತವಾಗಿಯೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದರು.
ನಡುಗಡ್ಡೆಗಳಾದ ಮಾದರಗಡ್ಡಿ,ವೆಂಕಮ್ಮನಗಡ್ಡಿಗಳಲ್ಲಿ ನೆಲೆಸಿರುವ ಕುಟುಂಬಗಳ ಬಳಿಗೆ ಖುದ್ದು
ನದಿಯ ನೀರಲ್ಲಿ ನಡೆದುಕೊಂಡು ಹೋದ ಅಧಿಕಾರಿಗಳ ತಂಡ,ಪ್ರವಾಹ ಬರುವ ಬಗ್ಗೆ ಎಚ್ಚರಿಕೆ ನೀಡಿದರು. ಪ್ರವಾಹದ ವೇಳೆ ನದಿಯಲ್ಲಿ ಹರಿಗೋಲು ಹಾಕಿಕೊಂಡು ಪ್ರಾಣಕ್ಕೆ ಅಪಾಯ ತಂದುಕೊಳ್ಳುವ ಬದಲು, ಮುಂಚೆಯೇ ಸುರಕ್ಷಿತ
ಸ್ಥಳಗಳಿಗೆ ತೆರಳಿ ಬದುಕು ಸಾಗಿಸಲು ಮನವೊಲಿಸಿದರು.
ಈಗಾಗಲೇ ನಡುಗಡ್ಡೆ ಸಂತ್ರಸ್ಥ ಕುಟುಂಬಗಳಿಗೆ ಬೇರೆ ಕಡೆಗೆ
ವಸತಿಗಾಗಿ ನಿವೇಶನಗಳ ಹಕ್ಕುಪತ್ರಗಳನ್ನು ನೀಡಲಾಗಿದ್ದು,
ವಸತಿ ವಿಭಾಗದಿಂದ ಮನೆಗಳನ್ನು ಕಟ್ಟಿಸಿಕೊಳ್ಳಲು ತಾತ್ಕಾಲಿಕವಾಗಿ ಶೆಡ್‍ಗಳ ನಿರ್ಮಾಣಕ್ಕೆ ಅಧಿಕಾರಿಗಳು ಭರವಸೆ ನೀಡಿದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರತಿವರ್ಷ ಪ್ರವಾಹ ಬಂದಾಗ ಕರೆದೊಯ್ಯಲು ಬರುತ್ತಿದ್ದ
ಅಧಿಕಾರಿಗಳು, ಈ ಬಾರಿ ಮುಂಚಿತವಾಗಿಯೇ ಬಂದು ಮನವೊಲಿಸಿ ಸಮಸ್ಯೆಗೆ ಸ್ಪಂಧಿಸುವುದಾಗಿ ಭರವಸೆ ನೀಡಿದ್ದರ ಪರಿಣಾಮ ಸಂತ್ರಸ್ಥರು ಅಧಿಕಾರಿಗಳ ಮಾತಿಗೆ ಒಪ್ಪಿಗೆ ಸೂಚಿಸಿದ್ದಾರೆ.
ಮಳೆಗಾಲ ಬಳಿಕ ಶಾಶ್ವತ ವಸತಿ ಹಾಗೂ ಉಳುಮೆ ಮಾಡಿ ಬದುಕು ಕಟ್ಟಿಕೊಳ್ಳಲು ಭೂಮಿಯನ್ನು ನೀಡಬೇಕೆಂದು
ಕೇಳಿಕೊಂಡಿದ್ದಾರೆ. ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ
ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು
ನೀಡಿದರೆಂದು ತಿಳಿದುಬಂದಿದೆ.
ಸಹಾಯಕ ಆಯುಕ್ತರ ಜೊತೆಗೆ ತಹಸೀಲ್ದಾರ್ ಚಾಮರಾಜ
ಪಾಟೀಲ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ, ಸಿಪಿಐ ಮಹಾಂತೇಶ ಸಜ್ಜನ್, ಜೆಸ್ಕಾಂ ಎಇಇ ಸುರೇಶ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

