ಲಿಂಗಸುಗೂರು : ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್ ಪ್ರತಿಭಟನೆ
ಲಿಂಗಸುಗೂರು : ಪೆಟ್ರೋಲ್-ಡೀಸೆಲ್, ರಸಗೊಬ್ಬರ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಜೆಡಿಎಸ್ ಮುಖಂಡ ಸಿದ್ದು ಬಂಡಿಯವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರದಲ್ಲಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದೊಲ್ಲೊಂದು ಅಡಚಣೆಗಳು ಬರುತ್ತಲೇ ಇವೆ. ಬೆಲೆ ಏರಿಕೆ ಎನ್ನುವ ಭೂತ ದೇಶದ ಜನರನ್ನು ಕಾಡುತ್ತಲೇ ಇದೆ. ಕೊರೊನಾ ವಿಪತ್ತು ನಿರ್ವಹಣೆಯ ಸಮಯದಲ್ಲೂ ಕೇಂದ್ರ ಸರಕಾರ ಕನಿಷ್ಠ ಕನಿಕರ ತೋರುತ್ತಿಲ್ಲ. ಬಡವರ ಜೀವನ ಬೀದಾಪಾಲಾಗುತ್ತಿದೆ. ದೇಶದಲ್ಲಿ ಆರ್ಥಿಕ ಕುಸಿತ ಉಂಟಾಗಿದೆ. ಅರಾಜಕತೆ ತಾಂಡವವಾಡುತ್ತಿದೆ. ಆದಾಗ್ಯೂ, ಜನಜೀವನ ಅಸ್ತವ್ಯಸ್ಥವಾಗುತ್ತಿರುವುದು ಕೇಂದ್ರದ ಕೃಪೆಯಾಗಿದೆ ಎಂದು ಸಿದ್ದುಬಂಡಿ ಲೇವಡಿ ಮಾಡಿದರು.
ಜೆಡಿಎಸ್ ಯುವ ಘಟಕದ ಅದ್ಯಕ್ಷ ಇಮ್ತೆಯಾಜ್‍ಪಾಷಾ, ಮುಖಂಡರಾದ ಅಮೀರ್‍ಬೇಗ್, ಸಿದ್ದು ಬಡಿಗೇರ್ ಸೇರಿ ಇತರರು ಪ್ರತಿಭಟನೆಯಲ್ಲಿ ಇದ್ದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು ಸಹಾಯಕ ಆಯುಕ್ತ ರಾಜಶೇಖರ ಡಂಬಳ್‍ರಿಗೆ ಮನವಿ ಸಲ್ಲಿಸಿದರು.

