ಲಿಂಗಸುಗೂರು ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡಲು ಸರಕಾರಕ್ಕೆ ಒತ್ತಾಯಿಸಲು ಮನವಿ
ಲಿಂಗಸುಗೂರು : ತಾಲೂಕಿನಲ್ಲಿ ನೂರಾರು ಸೊಂಕಿನ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇದರ ನಿಯಂತ್ರಿಸುವ ನಿಟ್ಟಿನಲ್ಲಿ ಹೆಚ್ಚಿನ ಆಧ್ಯತೆ ನೀಡುವಂತೆ ಸರಕಾರಕ್ಕೆ ಒತ್ತಾಯಿಸಬೇಕೆಂದು ಶಾಸಕ ಡಿ.ಎಸ್.ಹೂಲಗೇರಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯರಿಗೆ ಮನವಿ ಸಲ್ಲಿಸಿದರು.
ಬುಧವಾರ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಭೇಟಿಯಾಗಿ ಶಾಸಕ ಹೂಲಗೇರಿ, ಲಿಂಗಸುಗೂರು ತಾಲೂಕಿನಲ್ಲಿ ಸೊಂಕಿತರು ದಿನೇ ದಿನೇ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಉನ್ನತ ದರ್ಜೆಯ, ಸುಸಜ್ಜಿತ ಆಸ್ಪತ್ರೆಗಳ ಕೊರತೆ ಇದೆ. ರಾಯಚೂರು ಜಿಲ್ಲೆಗೆ ಆಕ್ಸಿಜನ್, ವೆಂಟಿಲೇಟರ್, ರೆಮಡಿಸಿವರ್ ಲಸಿಕೆಗಳನ್ನು ಸಮರ್ಪಕವಾಗಿ ಸರಬರಾಜು ಮಾಡಬೇಕು. ಹಟ್ಟಿ ಚಿನ್ನದ ಗಣಿಯಲ್ಲಿ ಕಂಪನಿ ವತಿಯಿಂದ ಇಂದಿರಾ ಕ್ಯಾಂಟೀನ್ ಮಾದರಿಯಂತೆ ಸಾರ್ವಜನಿಕರಿಗಾಗಿ ಕ್ಯಾಂಟೀನ್ ಆರಂಭ ಮಾಡಬೇಕು.
ತಾಲೂಕಿನಲ್ಲಿ ನೀರಾವರಿ, ವಿದ್ಯುತ್, ಕೃಷಿ ಸೇರಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಕ್ಷೇತ್ರದ ಕಾಳಜಿಗೆ ಸರಕಾರ ಮುಂದಾಗುವಂತೆ ಒತ್ತಡ ಹೇರಬೇಕೆಂದು ಮನವಿ ಮಾಡಿದರು.
ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸವನಗೌಡ ದದ್ದಲ್ ಸೇರಿ ಇತರರು ಇದ್ದರು.

