ಬೀದರ್

ಸರಕಾರಕ್ಕೆ 5 ಕೋಟಿ ರೂ. ಕೊಡುವ ಜರೂರತ್ತು ಏನಿತ್ತು..? ಆಲ್ಕೋಡ್ ಪ್ರಶ್ನೆ

ಲಿಂಗಸುಗೂರು : ಕ್ಷೇತ್ರದ ಜನರಿಂದ ಅಧಿಕಾರ ಪಡೆದಿರುವ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರು ಕ್ಷೇತ್ರದ ಕಾರ್ಮಿಕ ವರ್ಗಕ್ಕೆ, ಬಡವರಿಗೆ ಕೋವಿಡ್ ಸಂಕಷ್ಟದ ಕಾಲದಲ್ಲಿ ನೆರವಾಗುವ ಬದಲು ಸರಕಾರಕ್ಕೆ ಕಂಪನಿಯ ಕಾರ್ಮಿಕರು ಬೆವರು ಸುರಿಸಿ ದುಡಿದ 5 ಕೋಟಿ ರೂಪಾಯಿ ದುಡ್ಡನ್ನು ಕೊಡುವ ಜರೂರತ್ತಾದರೂ ಏನಿತ್ತು..? ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಹನುಮಂತಪ್ಪ ವೈ.ಆಲ್ಕೋಡ್ ಪ್ರಶ್ನಿಸಿದ್ದಾರೆ.


ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಜನರಿಂದ ನಾನು ಮೇಲೆ ಬಂದರೆ ಜನರನ್ನೇ ನನ್ನ ದೇವರೆಂದೆ ಎನ್ನವು ನಟಸಾರ್ವಭೌಮ ಡಾ.ರಾಜಕುಮಾರ ಹಾಡಿದಂತೆ, ಲಿಂಗಸುಗೂರು ಕ್ಷೇತ್ರದ ಜನರಿಂದ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಟ್ಟಿ ಚಿನ್ನದ ಗಣಿ ಅದ್ಯಕ್ಷರು ಕಂಪನಿಯ ಲಾಭಾಂಶದಲ್ಲಿ ಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂಧಿಸಿದ್ದರೆ ಅವರನ್ನು ಜನ ಮೆಚ್ಚಿಕೊಳ್ಳುತ್ತಿದ್ದರು. ಆದರೆ, ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತೆ ಕೋಟಿಗಟ್ಟಲೇ ದುಡ್ಡನ್ನು ಸರಕಾರಕ್ಕೆ ನೀಡುವ ಪ್ರಯೋಜನವಾದರೂ ಏನಿತ್ತು.? ತಾಲೂಕಿನ ಆಸ್ತಿಯಾಗಿರುವ ಚಿನ್ನದಗಣಿಯಲ್ಲಿನ ಸಂಪಾದನೆಯ ಹಣವನ್ನು ಸರಕಾರಕ್ಕೆ ಕೊಡುವ ಅವಶ್ಯಕತೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ.


ಕ್ಷೇತ್ರದಲ್ಲಿ ಜನ ಕೋವಿಡ್ ಲಾಕ್‍ಡೌನ್‍ನಿಂದ ಬದುಕು ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಬಡವರು, ಕೂಲಿಕಾರ್ಮಿಕರು, ಹಿಂದುಳಿದ ಅಲ್ಪಸಂಖ್ಯಾತರು, ಬಡ ಲಿಂಗಾಯತರು ಸೇರಿ ದುಡಿಮೆಯನ್ನೇ ನೆಚ್ಚಿಕೊಂಡಿದ್ದ ಶ್ರಮಿಕ ವರ್ಗವು ದುಡಿಮೆ ಇಲ್ಲದೇ ನಿತ್ಯದ ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಮನೆಯಲ್ಲಿದ್ದರೆ ಉಪವಾಸ, ಹೊರಗಡೆ ಹೋದರೆ ವನವಾಸ ಎನ್ನುವಂಥಹ ಪರಿಸ್ಥಿತಿ ತಲೆದೋರಿದೆ. ಜನರಿಂದ ಅಧಿಕಾರ ಪಡೆದು ಜನರನ್ನೇ ಮರೆಯುವ ಹಂತಕ್ಕೆ ಹೋಗಿದ್ದು ಖಂಡನೀಯ.


ಪ್ರತಿನಿಧಿಗಳಾದವರು ಜನರ ಗುಲಾಮರಾಗಿ ಇರಬೇಕೇ ಹೊರತು ಸರಕಾರದ ಗುಲಾಮರಾಗಿ ಇರಬಾರದು. ಹಟ್ಟಿ ಚಿನ್ನದಗಣಿ ಅದ್ಯಕ್ಷರ ಕೆಲಸಕ್ಕೆ ನಮ್ಮದೊಂದು ಧಿಕ್ಕಾರವಿದೆ. ತಾಲೂಕಿಗೆ ಆಗುತ್ತಿರುವ ಈ ಅನ್ಯಾಯವನ್ನು ಯಾವ ಪ್ರತಿನಿಧಿಯೂ ಸಹಿಸಬಾರದು. ಕೂಡಲೇ ಪ್ರತಿನಿಧಿಗಳು ಜನರಿಗಾಗಿ ದುಡಿಯಲು, ಸೇವೆ ಮಾಡಲು ಮುಂದಾಗಬೇಕು ಎಂದು ಮಾಜಿ ಸಚಿವರು ಕರೆ ನೀಡಿದರು.

Leave a Reply

Your email address will not be published. Required fields are marked *

error: Content is protected !!