ಮಾಹಿತಿ ನೀಡದ ಕೃಷಿ ಅಧಿಕಾರಿಗೆ 10 ಸಾವಿರ ರೂಪಾಯಿ ದಂಡ
ಲಿಂಗಸುಗೂರು : ಮಾಹಿತಿ ಹಕ್ಕಿನ ಅರ್ಜಿಗೆ ಸಕಾಲದಲ್ಲಿ ಮಾಹಿತಿ ನೀಡದೇ ನಿರ್ಲಕ್ಷ್ಯ ತೋರಿರುವ ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕ ಮಹಾಂತೇಶ ಹವಾಲ್ದಾರ್‍ರಿಗೆ ಮಾಹಿತಿ ಹಕ್ಕು ಆಯೋಗದಿಂದ 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.
ಸಮಾಜಸೇವಕ ಎನ್.ಬಸವರಾಜ ಎನ್ನುವವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. 2020 ಜನೇವರಿ 6 ರಂದು ಆಯೋಗವು ವಿಚಾರಣೆ ನಡೆಸಿ, 2017 ಮೇ 3 ರಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಫಲಾನುಭವಿಗಳಿಗೆ ನೀಡಿರುವ ಸಹಾಯ ಧನವು ಸೇರಿರುವ ಸರ್ವೆ ನಂಬರ್‍ಗೆ ಸಂಬಂಧಿಸಿದ ಮಾಹಿತಿ ದೃಢೀಕರಿಸಿ 20 ದಿನದೊಳಗೆ ಉಚಿತವಾಗಿ ನೋಂದಾಯಿತ ಅಂಚೆ ಸ್ವೀಕೃತಿ ಮುಖಾಂತರ ಅರ್ಜಿದಾರರಿಗೆ ಒದಗಿಸಬೇಕೆಂದು ಹಾಗೂ ಸದರಿ ಮಾಹಿತಿ ಮತ್ತು ಅಂಚೆ ಸ್ವೀಕೃತಿಯ ನಕಲು ಪ್ರತಿಗಳನ್ನು ಮುಂದಿನ ವಿಚಾರಣೆಗೆ ಖುದ್ದು ಹಾಜರಿದ್ದು ಆಯೋಗಕ್ಕೆ ಸಲ್ಲಿಸಬೇಕೆಂದು ಸೂಚನೆ ನೀಡಲಾಗಿತ್ತು. ಅರ್ಜಿದಾರರಿಗೆ ನಿಗದಿತ ಅವಧಿಯೊಳಗೆ ಮಾಹಿತಿ ನೀಡದ ಕಾರಣ ಮಾಹಿತಿ ಹಕ್ಕು ಅಧಿನಿಯಮ 2005 ರ ಕಲಂ 20(1)ರಡಿ ರೂ. 25 ಸಾವಿರ ರೂಪಾಯಿವರೆಗೆ ದಂಡ ಏಕೆ ವಿಧಿಸಬಾರದು ಎಂಬ ಬಗ್ಗೆ ಕಾರಣ ಕೇಳಿ ಲಿಖಿತ ಸಮಜಾಯಿಷಿ ಮುಂದಿನ ವಿಚಾರಣೆ ದಿನದಂದು ಆಯೋಗಕ್ಕೆ ಸಲ್ಲಿಸಬೇಕೆಂದು ಆಯೋಗವು ಸಹಾಯಕ ಕೃಷಿ ನಿರ್ದೇಶಕರಿಗೆ ನಿರ್ದೇಶಿಸಿತ್ತು.
ಆಯೋಗವು ಹಿಂದಿನ ಆದೇಶ ಪರಿಶೀಲಿಸಿದಾಗ 2018 ಮೇ 23, 2019 ಆಗಸ್ಟ್ 9, 2019 ನವಂಬರ್ 23, 2020 ಜನೇವರಿ 6 ರ ಆಯೋಗವು ದಂಡ ವಿಧಿಸುವುದಾಗಿ ಸ್ಪಷ್ಟ ನಿರ್ದೇಶನ ನೀಡಿದ್ದರೂ ಸಹ ಯಾವುದೇ ಲಿಖಿತ ಸಮಜಾಯಿಷಿ ನೀಡದೆ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಉದ್ಧೇಶಪೂರ್ವಕವಾಗಿ ಅರ್ಜಿದಾರರಿಗೆ ಮಾಹಿತಿ ಒದಗಿಸಿರುವುದಿಲ್ಲವೆಂದು ಪರಿಗಣಿಸಿ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 20(1)ರನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಸಹಾಯಕ ಕೃಷಿ ನಿರ್ದೇಶಕ ಮಹಾಂತೇಶ ಹವಲ್ದಾರರಿಗೆ 10 ಸಾವಿರ ರೂಪಾಯಿ ದಂಡವಿಧಿಸಲಾಗಿದೆ.

