ಅಲೆಮಾರಿಗಳ ರೋಧನ ಕೇಳೊರಿಲ್ಲಾ ಸ್ವಾಮಿ.. ಗಂಜಿಯೇ ಬದುಕಿಗೆ ಆಸರೆ..!
ವರದಿ : ಖಾಜಾಹುಸೇನ್
ಲಿಂಗಸುಗೂರು : ‘ಲಾಕ್‍ಡೌನ್ ಆಗಿ ತಿಂಗಳಾಗ್ತಾ ಬಂದ್ರೂ, ನಮ್ಕಡಿಗೆ ಯಾರೋ ಇಣುಕಿ ನೋಡ್ತಿಲ್ಲಾ ಸ್ವಾಮಿ. ಪ್ಲಾಸ್ಟಿಕ್ ಕೊಡ, ಬಟ್ಟೆ ಮಾರಾಟ ಮಾಡಿ ಬದುಕತಿದ್ವಿ. ಈಗ ಎಲ್ಲಾ ಬಂದ್ ಆಗೈತ್ರಿ. ನಮ್ಮ ರೋಧನ ಯಾರೂ ಕೇಳಲು ಮುಂದಾಗ್ತಿಲ್ಲ. ಮಕ್ಳು ಮರಿನಾ ಕಟಿಗೊಂಡು ಗಂಜಿ ಕುಡಕಂತಾ ಜೀವನ ನಡಸಾಕತ್ತೀವ್ರಿ. ಅಕ್ಕಿ, ರೇಷನ್ ಕೊಡ್ತೀವಂತ ಹೇಳಿದ್ರು. ಆದ್ರ ಯಾರೂ ಬರವಲ್ರು ಸ್ವಾಮಿ..’ ಪಟ್ಟಣದಲ್ಲಿ ವಾಸಿಸುತ್ತಿರುವ ಅಲೆಮಾರಿ ಸಮುದಾಯದ ಕುಟುಂಬಸ್ಥರ ರೋಧನವಿದು.

ಲಾಕ್‍ಡೌನ್ ಆದಾಗಿನಿಂದ ಸಣ್ಣ-ಪುಟ್ಟ ವ್ಯಾಪಾರಿಗಳ, ದಿನಗೂಲಿಗಳ ಬದುಕು ಬರಡಾಗುತ್ತಿದೆ. ಸಣ್ಣ ವ್ಯಾಪಾರವನ್ನು ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿರುವ ಅಲೆಮಾರಿ ಸಮುದಾಯದ ಜನರಿಗೀಗ ಸಹಾಯ ಹಸ್ತದ ನೆರವು ಬೇಕಿದೆ. ತಾಲೂಕಾಡಳಿತ ಇವರನ್ನು ಕಡೆಗಣಿಸಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಪುರಸಭೆ ವ್ಯಾಪ್ತಿಯಲ್ಲಿ ಅಲೆಮಾರಿ ಸಮುದಾಯದ 35-40 ಕುಟುಂಬಗಳು ವಾಸಿಸುತ್ತಿವೆ. ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಪರಿಣಾಮ ಎಲ್ಲರೂ ತಮ್ಮ ಡೇರೆಗಳಲ್ಲಿಯೇ ಉಳಿದುಕೊಂಡಿದ್ದಾರೆ. ಇಷ್ಟು ದಿನ ಹೇಗೋ ಗಂಜಿ ಕುಡಿದು ಬದುಕು ಸಾಗಿಸಿದ್ದಾರೆ. ಆದರೆ, ಲಾಕ್‍ಡೌನ್ ಇನ್ನೂ ಮುಂದುವರೆಯುವ ಸಾಧ್ಯತೆಗಳು ಇರುವುದರಿಂದ ಭವಿಷ್ಯದ ಬದುಕಿನಲ್ಲಿ ಆಹಾರದ ಬಗ್ಗೆ ಇವರೀಗ ಚಿಂತೆಗೀಡಾಗಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಡೇರೆಗಳಿಗೆ ಬಂದು ಮತಯಾಚನೆ ಮಾಡಿ ಆಶ್ವಾಸನೆ ನೀಡಿದ್ದಷ್ಟೇ ಖರೆ. ನಂತರ ಇವರತ್ತ ತಿರುಗಿ ನೋಡಿಯೂ ಇಲ್ಲ ಎನ್ನುವ ಆರೋಪಗಳಿವೆ. ಸ್ವಂತ ಸೂರಿಲ್ಲದೇ ಬದುಕುತ್ತಿರುವ ಈ ಕುಟುಂಬಗಳಿಗೆ ಮೂಲ ಸವಲತ್ತುಗಳೂ ಮರಿಚೀಕೆಯಾಗಿವೆ. ಕೂಡಲೇ ಇತ್ತ ಕಡೆ ಅಧಿಕಾರಿಗಳು ಕಣ್ತೆರೆದು ನೋಡುವ ಮೂಲಕ ಅಲೆಮಾರಿಗಳ ಸಮಸ್ಯೆಗಳಿಗೆ ಸ್ಪಂಧಿಸಬೇಕಿದೆ. ಎಷ್ಟರ ಮಟ್ಟಿಗೆ ಆಡಳಿತ ಅಲೆಮಾರಿಗಳ ಸಹಾಯಕ್ಕೆ ಮುಂದಾಗುವುದೋ ಕಾದು ನೋಡೋಣ.
‘ಪುರಸಭೆ ವ್ಯಾಪ್ತಿಯಲ್ಲಿರುವ ಅಲೆಮಾರಿ ಕುಟುಂಬಸ್ಥರಿಗೆ ಸರಕಾರದ ಯಾವುದೇ ಸವಲತ್ತುಗಳು ಇಲ್ಲ. ಪುರಸಭೆ ಅಧಿಕಾರಿಗಳು, ವಾರ್ಡ್ ಸದಸ್ಯರು ಇತ್ತ ಸುಳಿಯುವುದಿಲ್ಲ. ಪಡಿತರ ಚೀಟಿ ಇದ್ದರೂ ಇವರಿಗೆ ಸಮರ್ಪಕವಾಗಿ ಪಡಿತರ ಧಾನ್ಯ ಸಿಗುತ್ತಿಲ್ಲ. ಕೂಡಲೇ ಆಡಳಿತ ಅಲೆಮಾರಿಗಳ ನೆರವಿಗೆ ಧಾವಿಸಬೇಕು. ಇಲ್ಲಿನ ಜನರ ಆರೋಗ್ಯ ಸಮಸ್ಯೆಗಳಿಗೆ ಆರೋಗ್ಯ ಇಲಾಖೆ ಸ್ಪಂಧಿಸಬೇಕು.’ – ಜಿಲಾನಿಪಾಷಾ, ಕರವೇ ಅದ್ಯಕ್ಷ.

