ರಾಯಚೂರು

ಕಾನೂನು ಪಾಲನೆ ಮಾಡದಿದ್ದರೆ ಕಠಿಣ ಕ್ರಮ ಸರಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಡಿವೈಎಸ್‍ಪಿ ಹುಲ್ಲೂರು ಕರೆ

ಲಿಂಗಸುಗೂರು : ಕೋವಿಡ್ ಮಹಾಮಾರಿಯ ಎರಡನೇ ಅಲೆಯು ರಾಜ್ಯದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಪವಿತ್ರ ರಮಝಾನ್ ಮಾಸಾಚರಣೆಯಲ್ಲಿ ನಿರತರಾಗಿರುವ ಮುಸ್ಲಿಂ ಬಾಂಧವರು ಸರಕಾರದ
ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಿವೈಎಸ್‍ಪಿ ಎಸ್.ಎಸ್.ಹುಲ್ಲೂರು ಕರೆ ನೀಡಿದರು.

ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಮುಸ್ಲಿಂ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು,ಜೀವವಿದ್ದರೆ ಜೀವನ, ಜೀವನ ಇದ್ದರೆ ಪ್ರಾರ್ಥನೆ. ಪ್ರಾರ್ಥನಾ ಸ್ಥಳಗಳಲ್ಲಿ
ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಮೌಲ್ವಿಸಾಹೇಬರು ಸೇರಿ ಮಸ್ಜಿದ್‍ಗೆ ಸಂಬಂಧಿಸಿದ ನಾಲ್ಕಾರು ಜನರು ಮಾತ್ರ ಸಾಮಾಜಿಕ ಅಂತರ
ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಬೇಕು. ಮಸ್ಜಿದ್‍ಗಳಲ್ಲಿ
ಇಫ್ತೆಯಾರ್ ಕೂಟಗಳನ್ನು ನಿರ್ಬಂಧಿಸಲಾಗಿದೆ ಎಂದರು.

ಈಗಾಗಲೇ ರಾಯಚೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಜೊತೆಗೆ ಲಿಂಗಸುಗೂರು ತಾಲೂಕಿನಲ್ಲಿಯೂ 44 ಪ್ರಕರಣಗಳು ದಾಖಲಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಇಲ್ಲದೇ ಹೊರಗಡೆ
ಬಾರಬಾರದು. ಜಿಲ್ಲಾಧಿಕಾರಿಗಳ ಆದೇಶದನ್ವಯ ಸಾರ್ವಜನಿಕರು ಕಟ್ಟುನಿಟ್ಟಾಗಿ ಕಾನೂನು ಪಾಲನೆ ಮಾಡಬೇಕು. ಇಲ್ಲವಾದಲ್ಲಿ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.

ಸಿಪಿಐ ರಮೇಶ ಕುಲಕರ್ಣಿ, ಪಿಎಸ್‍ಐ ಪ್ರಕಾಶರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ, ತಂಜಿಮುಲ್ ಮುಸ್ಲಿಮಿನಿ ಕಮೀಟಿ ಅದ್ಯಕ್ಷ ಲಾಲಹ್ಮದ್‍ಸಾಬ, ಉಪಾದ್ಯಕ್ಷ ಖಾದರಬಾಷಾ ಸೇರಿ ಸಮುದಾಯದ ಹಿರಿಯರು ಸಭೆಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!