ರಾಯಚೂರು

ಗ್ರಾಮ ಪಂಚಾಯತ್ ಚುನಾವಣಾ ಮತ ಎಣಿಕೆ ಕಾರ್ಯ ಜಿಲ್ಲಾಡಳಿತದಿಂದ ಸಕಲ ಸಿದ್ದತೆ: ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್


ರಾಯಚೂರು,ಡಿ.೨೯:- ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕಾ ಕಾರ್ಯ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಡಿ.೩೦ರ ಬೆಳಿಗ್ಗೆ ೮ ರಿಂದ ಆರಂಭವಾಗಲಿದ್ದು, ಜಿಲ್ಲಾಡಳಿತದಿಂದ ಸಕಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ತಿಳಿಸಿದರು.
ಅವರು ಡಿ.೨೯ರ ಮಂಗಳವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.


ಜಿಲ್ಲೆಯ ೧೭೨ ಗ್ರಾಮ ಪಂಚಾಯತ್‌ಗಳ ೧೪೮೭ ಮತಗಟ್ಟೆಗಳಲ್ಲಿ ನಡೆದ ಮತದಾನದ ಎಣಿಕಾ ಕಾರ್ಯವು ಜಿಲ್ಲೆಯ ಏಳು ತಾಲೂಕ ಕೇಂದ್ರಗಳಲ್ಲಿ ನಡೆಯಲಿದೆ. ಮತ ಏಣಿಕೆಗೆ ೪೬೧ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದ್ದು, ೧೩೮೩ ಸಿಬ್ಬಂದಿಗಳು ಮತ ಎಣಿಕೆ ನಡೆಸಲಿದ್ದಾರೆ, ಹೆಚ್ಚುವರಿಯಾಗಿ ೧೧೩ ಸಿಬ್ಬಂದಿಗಳನ್ನು ಹಾಗೂ ೧೧೬೧ ಗ್ರೂಪ್-ಡಿ ಹಾಗೂ ಸಹಾಯಕ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಹೇಳಿದರು.


ಜಿಲ್ಲೆಯ ಒಟ್ಟಾರೆ ೧೧೮೧ ಮತಕ್ಷೇತ್ರಗಳ ಮತ ಏಣಿಕೆಗೆ ೭೩ ಏಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾಯಚೂರು- ೧೫, ದೇವದುರ್ಗ -೧೮, ಮಾನವಿ- ೫, ಸಿರವಾರ- ೭, ಲಿಂಗಸೂಗೂರು- ೬, ಸಿಂಧನೂರು- ೧೪, ಮಸ್ಕಿ- ೮ ಕೋಣೆಗಳನ್ನು ವ್ಯವಸ್ಥೆ ಮಾಡಲಾಗಿದೆ. ರಾಯಚೂರು ತಾಲೂಕಿನ ೧೦೨ ಟೇಬಲ್, ದೇವದುರ್ಗ ೬೬, ಮಾನವಿ ೩೬, ಸಿರವಾರ- ೩೨, ಲಿಂಗಸೂಗೂರು ೭೪, ಸಿಂಧನೂರು ೯೯ ಮತ್ತು ಮಸ್ಕಿ ೫೨ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ.


ರಾಯಚೂರು ತಾಲೂಕಿನ ೩೩ ಗ್ರಾಮ ಪಂಚಾಯ್ತಿಗಳ ಮತ ಏಣಿಕೆ ನಗರದ ಎಸ್‌ಆರ್‌ಪಿಯು ಕಾಲೇಜಿನಲ್ಲಿ ನಡೆಯಲಿದೆ. ಮಾನವಿ ತಾಲೂಕಿನ ೧೭ಗ್ರಾಮ ಪಂಚಾಯ್ತಿಗಳ ಮತ ಏಣಿಕೆ ಬಾಷುಮಿಯಾ ಪ್ರಥಮ ದರ್ಜೆ ಕಾಲೇಜಿನಲ್ಲಿ, ಸಿರವಾರ ತಾಲೂಕಿನ ೧೪ ಮತ ಏಣಿಕೆ ಪ್ರಥಮ ದರ್ಜೆ ಕಾಲೇಜಿನಲ್ಲಿ, ದೇವದುರ್ಗದ ೨೮ ಪಂಚಾಯ್ತಿಗಳ ಮತ ಏಣಿಕೆ ಡಾನ್ ಬಾಸ್ಕೋ ಶಾಲೆ, ಲಿಂಗಸೂಗೂರು ೨೯ ಪಂಚಾಯ್ತಿಗಳ ಮತ ಏಣಿಕೆ ಪದವಿ ಪೂರ್ವ ಕಾಲೇಜು, ಸಿಂಧನೂರು ತಾಲೂಕಿನ ೩೦ ಪಂಚಾಯತ್‌ಗಳ ಮತ ಏಣಿಕೆ ಕುಷ್ಟಗಿ ರಸ್ತೆಯಲ್ಲಿರುವ ಪ್ರಥಮ ದರ್ಜೆ ಕಾಲೇಜು, ಮಸ್ಕಿ ತಾಲೂಕಿನ ೨೧ ಪಂಚಾಯ್ತಿಗಳ ಮತ ಏಣಿಕೆ ದೇವನಾಂಪ್ರಿಯ ಅಶೋಕ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.


ನೀತಿ ಸಂಹಿತೆ ಜಾರಿಗೊಂಡ ನಂತರ ಅಕ್ರಮ ಮದ್ಯ ಸಾಗಾಣಿಕೆಯ ೨೦ ಪ್ರಕರಣಗಳು ಪತ್ತೆಯಾಗಿವೆ. ಅವುಗಳಲ್ಲಿ ೧೮ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ, ೧೦.೫೮ ಲಕ್ಷ ರೂ.ಗಳ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. ತುಪ್ಪದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ತಹಸೀಲ್ದಾರರು ಹಾಗೂ ಚುನಾವಣಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಅವರಿಂದ ಉತ್ತರ ಬಂದ ನಂತರ ಕ್ರಮವಹಿಸುವದಾಗಿ ಹೇಳಿದರು.
೪೧೭ ಸದಸ್ಯರು ಅವಿರೋಧ ಆಯ್ಕೆ ಮಾಡಲಾಗಿದೆ. ಅವಿರೋಧ ಆಯ್ಕೆಯಾಗಿರುವ ಕುರಿತು ಯಾವುದೇ ದೂರುಗಳು ಬಂದಿಲ್ಲ. ಮತ ಏಣಿಕೆ ಕೇಂದ್ರದಲ್ಲಿ ಅಭ್ಯರ್ಥಿ ಹಾಗೂ ಒಬ್ಬ ಏಜೆಂಟ್‌ಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಕೊರೋನಾ ಹಿನ್ನಲೆಯಲ್ಲಿ ಮಾಸ್ಕ, ಸ್ಯಾನಿಟೈಜರ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಮತ ಏಣಿಕೆ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದು ಯಾವುದೇ ಮೆರವಣಿಗೆ ಮಾಡುವಂತಿಲ್ಲ. ಮತ ಏಣಿಕೆ ಕೇಂದ್ರದಲ್ಲಿ ಪೊಲೀಸ್ ಹಾಗೂ ಗೃಹ ರಕ್ಷಕ ದಳ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದರು.


ಇಂಗ್ಲೆಂಡ್‌ನಿಂದ ೧೮ ಪ್ರಯಾಣಿಕರು ಜಿಲ್ಲೆಗೆ ಆಗಮಿಸಿದ್ದಾರೆ. ಅವರಲ್ಲಿ ೧೪ ಜನರಲ್ಲಿ ಪರೀಕ್ಷೆ ಒಳಪಡಿಸಲಾಗಿದ್ದು ಎಲ್ಲರದ್ದೂ ನೆಗಟಿವ್ ವರದಿ ಬಂದಿದೆ. ಆದರೂ ೧೪ ದಿನ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇನ್ನುಳಿದ ನಾಲ್ಕು ಜನರು ತೆಲಂಗಾಣದಲ್ಲಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಎಚ್. ದುರುಗೇಶ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!