ಲಿಂಗಸುಗೂರಲ್ಲಿ ಭತ್ತ ಖರೀದಿ ಕೇಂದ್ರ ಆರಂಭಕ್ಕೆ ಒತ್ತಾಯ
ಲಿಂಗಸುಗೂರು : ತಾಲೂಕಿನಲ್ಲಿ ಭತ್ತ ಬೆಳೆದ ರೈತರು ಸೂಕ್ತ ಬೆಲೆ ಇಲ್ಲದೇ ಕಂಗಾಲಾಗಿದ್ದು, ಕೂಡಲೇ ಸರಕಾರ ವೈಜ್ಞಾನಿಕ ಬೆಂಬಲ ಬೆಲೆಯನ್ನು ನಿಗದಿಪಡಿಸಿ ಭತ್ತ ಖರೀದಿ ಕೇಂದ್ರವನ್ನು ಆರಂಭಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಒತ್ತಾಯಿಸಿದರು.
ಶಿರಸ್ತೆದಾರ ಶಾಲಂಸಾಬರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ರೈತರ ಸಮಸ್ಯೆಗಳಿಗೆ ಸ್ಪಂಧಿಸುವ ಜೊತೆಗೆ ರೈತರ ಬೆಳೆಗೆ ಮಾರುಕಟ್ಟೆಯನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಭತ್ತ ಖರೀದಿ ಕೇಂದ್ರವನ್ನು ಆರಂಭಿಸಬೇಕು. ಲಾಕ್‍ಡೌನ್ ನೆಪದಲ್ಲಿ ತರಕಾರಿ ಬೆಲೆಯನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಿಕೊಳ್ಳುವ ಮೂಲಕ ವಂಚನೆ ಮಾಡುತ್ತಿರುವುದನ್ನು ತಡೆಯಬೇಕು. ಬಡವರಿಗೆ ಕೈಗೆಟುಕುವ ದರದಲ್ಲಿ ತರಕಾರಿ ಬೆಲೆ ಮಾರಾಟಕ್ಕೆ ನಿಗದಿಪಡಿಸಬೇಕು. ಗುರುಗುಂಟಾ ಭಾಗದ ದೊಡ್ಡಿಗಳಿಗೆ ಸಮರ್ಪಕವಾರಗಿ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಿಕೊಡಬೇಕು.
ರಾಂಪುರ ಏತನೀರಾವರಿ ಕಾಲುವೆಯ ಬಸಿನೀರಿನಿಂದ ಬಸವಳಿಯುತ್ತಿರುವ ಜಾಗೀರನಂದಿಹಾಳ ಗ್ರಾಮದಲ್ಲಿನ ಸಮಸ್ಯೆಯನ್ನು ನಿವಾರಣೆ ಮಾಡಬೇಕು. ರಸಗೊಬ್ಬರ, ಕ್ರಿಮಿನಾಶಕಗಳ ಬೆಲೆ ಹೆಚ್ಚಳವಾಗಿದ್ದು ಕೂಡಲೇ ರೈತರ ಕೈಗೆಟುಕುವ ದರದಲ್ಲಿ ಮಾರಾಟ ಮಾಡಲು ಆದೇಶಿಸಬೇಕು. ಎಪಿಎಂಸಿ ಆವರಣದಲ್ಲಿ ಖರೀದಿ ಸಮಯವನ್ನು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಸೇರಿ ಇತರೆ ಬೇಡಿಕೆಗಳ ಈಡೇರಿಕೆಗೆ ರೈತರು ಒತ್ತಾಯಿಸಿದರು.
ಸಂಘಟನೆಯ ಅದ್ಯಕ್ಷ ಶಿವಪುತ್ರಪ್ಪಗೌಡ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

