ಆರೋಪ ಸತ್ಯಕ್ಕೆ ದೂರ : ಪುರಸಭೆ ಮುಖ್ಯಾಧಿಕಾರಿ ಬೆಂಬಲಕ್ಕೆ ನಿಂತ ಸದಸ್ಯರು
ಲಿಂಗಸೂಗೂರು : ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ
ವಿಜಯಲಕ್ಷ್ಮಿಯವರ ವಿರುದ್ಧ ಪುರಸಭೆ ಅದ್ಯಕ್ಷ-
ಉಪಾದ್ಯಕ್ಷರಾದಿಯಾಗಿ ಕೆಲ ಸದಸ್ಯರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಕೂಡಲೇ ಈ ವಿಷಯವನ್ನು ಗಂಭೀರವಾಗಿಿ ಪರಿಗಣಿಸಿ ಸೂಕ್ತ ತನಿಖೆ ಮಾಡಿ ಸತ್ಯಾಸತ್ಯತೆಯನ್ನು ಬಯಲಿಗೆಳೆದು,
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಪುರಸಭೆ
ಸದಸ್ಯರಾದ ಮುದುಕಪ್ಪ ನಾಯಕ, ರಾಜೇಶ್ವರಿ ಪ್ರಭಯ್ಯಸ್ವಾಮಿ,ಜರೀನಾಬೇಗಂ ಅಬ್ದುಲ್ಲಾ ಸೇರಿ ನಾಮನಿರ್ದೇಶಿತ ಸದಸ್ಯರು ಒತ್ತಾಯಿಸಿದರು.
ಸಹಾಯಕ ಆಯುಕ್ತರ ಕಚೇರಿ ಸಿಬ್ಬಂಧಿ ಮೂಲಕ
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಕಳೆದ ಮೂರು ತಿಂಗಳುಗಳ ಹಿಂದೆ ಲಿಂಗಸುಗೂರು ಪುರಸಭೆಗೆ
ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ವಿಜಯಲಕ್ಷ್ಮಿಯವರ ವಿರುದ್ಧ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ವಿಷಯವಾಗಿದೆ.ವಾರದಲ್ಲಿ ನಾಲ್ಕರಿಂದ ಐದು ದಿನ ಕಚೇರಿಯಲ್ಲಿ ಲಭ್ಯ ಇರುವುದಿಲ್ಲವೆಂದು ಆರೋಪ ಮಾಡಿರುವುದು ಸುಳ್ಳು. ಮೇಲಧಿಕಾರಿಗಳ
ಆದೇಶದಂತೆ ರಾಯಚೂರು ಮತ್ತು ಕೋರ್ಟ್ ಕೆಲಸಗಳಿಗೆ
ಹಾಜರಾಗಬೇಕಾಗುತ್ತದೆ. ಸಕಾಲದಲ್ಲಿ 7 ದಿನಗಳೊಳಗೆ ಫಾರಂ ನಂ.3 (ಖಾತಾನಕಲು) ಉದ್ದೇಶಪೂರ್ವಕವಾಗಿ ವಿಳಂಬ ಮಾಡಿ ಹೆಚ್ಚಿನ ದುಡ್ಡು ನಿರೀಕ್ಷಿಸುತ್ತಾರೆನ್ನುವುದು ದೂರು ಕೊಟ್ಟ ಸದಸ್ಯರ ಕಟ್ಟುಕಥೆಯಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರುಗಳಿಲ್ಲ.
ಕೆಲ ಸದಸ್ಯರ ವಿಪರೀತ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡಬಹುದಾಗಿದೆ.
ಆಸ್ತಿ ವರ್ಗಾವಣೆ ದಿನನಿತ್ಯ ಕೆಲವು ಸದಸ್ಯರು ಹಸ್ತಕ್ಷೇಪ
ಮಾಡುತ್ತಿದ್ದು ಇವರು ಈ ಹಿಂದೆ ಕೈಬರಹ ಫಾರ್ಮ್ ನಂ.3 ಮತ್ತು ಮುಟೇಶನ್ ಕೈ ಬರಹದ ಮೂಲಕ ಯಾವುದೇ ಶುಲ್ಕ ಕಟ್ಟದೇ ಪಡೆಯುವ ಪದ್ಧತಿ ರೂಢಿಯಾಗಿತ್ತು.ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರು ಕೈ ಬರಹದ ಪದ್ಧತಿಗೆ ಒಪ್ಪದೇ ಆನ್‍ಲೈನ್ ಪದ್ಧತಿ ಅಳವಡಿಸುವುದರಿಂದ ಇವರಿಗೆ ದಾಖಲಾತಿ ಹಾಗೂ ಶುಲ್ಕ ಭರಿಸಲು ತೊಂದರೆ ಆಗಿ ವಿನಾಕಾರಣ ಇವರ ವಿರುದ್ಧ ಆರೋಪ ಮಾಡುತ್ತಾರೆ. ಇದು
ಎಲ್ಲರಿಗೂ ತಿಳಿದ ವಿಷಯವಾಗಿದೆ.
ಕಟ್ಟಡ ಪರವಾನಿಗೆಯಲ್ಲೂ ಕೆಲ ಸದಸ್ಯರು
ಮಧ್ಯವರ್ತಿಗಳಂತೆ ವರ್ತಿಸುತ್ತಿದ್ದಾರೆ. ಈ ಹಿಂದೆ ಸರಿಯಾಗಿ ದಾಖಲಾತಿ ನೀಡದೇ ಕಡಿಮೆ ಶುಲ್ಕ ಪಡೆದು ಕಟ್ಟಡ ಪರವಾನಿಗೆ ಮಾಡಿಕೊಳ್ಳುವ ರೂಡಿಗತ ಮಾಡಿಕೊಂಡಿರುತ್ತಾರೆ. ನೈರ್ಮಲೀಕರಣದ ಬಗ್ಗೆ
ಮುಖ್ಯಾಧಿಕಾರಿಗಳು ಬಂದ ಮೇಲೆ ಎಲ್ಲಾ ವಾರ್ಡ್‍ಗಳಿಗೂ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಜನರಿಗೆ ತಿಳಿ ಹೇಳುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಲ್ಲಿ ಪ್ರಶಂಸೆಗಳು ವ್ಯಕ್ತವಾಗಿವೆ.
ತಮಗೆ ವಾಹನ ಕೊಡಲಿಲ್ಲವೆಂದು ಅದ್ಯಕ್ಷರು
ಮುಖ್ಯಾಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ? ವಾಹನ ಇರುವುದು ಅದ್ಯಕ್ಷರಿಗೋ ಮುಖ್ಯಾಧಿಕಾರಿಗೋ?ಆಸ್ತಿ ವರ್ಗಾವಣೆಯಲ್ಲಿ ಅದ್ಯಕ್ಷರು ಮತ್ತು ಸದಸ್ಯರುಗಳು ಹಸ್ತಕ್ಷೇಪ ಮಾಡಬಾರದೆಂದು ಸರಕಾರದ ಆದೇಶವಿದ್ದಾಗ್ಯೂ ಹಸ್ತಕ್ಷೇಪ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಈ ವಿಷಯಗಳಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು.
ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರ ಪ್ರಾಮಾಣಿಕತೆ ಸಹಿಸದೇ,ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದಕ್ಕಾಗಿ ಅವರಿಗೆ ಭ್ರಷ್ಟ ಅಧಿಕಾರಿ ಎಂದು ಹೇಳುವ ಮೂಲಕ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಅವರ ವರ್ಗಾವಣೆಗೆ ಸಂಚು ರೂಪಿಸಲಾಗುತ್ತಿದೆ. ಕೂಡಲೇ ವಿಷಯವನ್ನು
ಗಂಭೀರವಾಗಿ ಪರಿಗಣಿಸಿ ತನಿಖಾ ತಂಡವನ್ನು ರಚನೆ ಮಾಡಬೇಕು.ಕಳೆದ ಮೂರು ವರ್ಷಗಳಲ್ಲಿ ನಡೆದ ಅಕ್ರಮ ಖಾತೆ ಮತ್ತು 30ಕ್ಕಿಂತ ಹೆಚ್ಚು ಲೇಔಟ್‍ಗಳ ಅಭಿವೃದ್ಧಿ ಆಗದೇ ಖಾತಾನಕಲು ಹಂಚಿಕೆ ಮಾಡಿರುವ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಮಾನಸಿಕವಾಗಿ ನೊಂದಿರುವ ಮುಖ್ಯಾಧಿಕಾರಿಗಳ ಪರವಾಗಿ
ನಾವಿದ್ದೇವೆ ಎನ್ನುವ ಸಂದೇಶವನ್ನು ಈ ಮನವಿ ಮೂಲಕ ಪುರಸಭೆ ಸದಸ್ಯರಾದ ಮುದುಕಪ್ಪ ನಾಯಕ, ಗಿರಿಜಮ್ಮ ವೀರಪಾಕ್ಷಪ್ಪ, ರಾಜೇಶ್ವರಿ ಪ್ರಭಯ್ಯಸ್ವಾಮಿ, ಜರೀನಾಬೇಗಂ ಅಬುಲ್ಲಾ, ನಾಮ ನಿರ್ದೇಶಿತ ಸದಸ್ಯರಾದ ಮಲ್ಲಿಕಾರ್ಜುನ, ಮಹಾಂತೇಶ ನರಕಲದಿನ್ನಿ, ದೇವಣ್ಣ, ಅಮರೇಶ,
ಚನ್ನಬಸಯ್ಯಸ್ವಾಮಿ ರವಾನಿಸಿದ್ದಾರೆ.

