ಫುಡ್‍ಕಿಟ್ ವಿತರಣೆಯಲ್ಲಿ ನೂಕುನುಗ್ಗಲು ಕಾರ್ಮಿಕರಿಗಾಗಿ ಪ್ರತ್ಯೇಕ ಆಸ್ಪತ್ರೆ ನಿರ್ಮಾಣಕ್ಕೆ ವರದಿ : ಶಾಸಕ ಹೂಲಗೇರಿ
ಲಿಂಗಸುಗೂರು : ಬಡ ಕೂಲಿಕಾರ್ಮಿಕರ ಆರೋಗ್ಯ ತಪಾಸಣೆಗಾಗಿಯೇ ಪ್ರತ್ಯೇಕ ಆಸ್ಪತ್ರೆ ನಿರ್ಮಾಣ ಮಾಡಲು ಸರಕಾರಕ್ಕೆ ಶಿಫಾರಸ್ಸು ವರದಿ ಮಾಡಲಾಗುವುದು ಎಂದು ಶಾಸಕ ಡಿಎಸ್ ಹೂಲಗೇರಿ ತಿಳಿಸಿದರು.
ಕಾರ್ಮಿಕ ಇಲಾಖೆ ವತಿಯಿಂದ ಸ್ಥಳೀಯ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ನೋಂದಾಯಿತ ಕಾರ್ಮಿಕರಿಗೆ ಫುಡ್‍ಕಿಟ್‍ಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರದಿಂದ ಕೊಡಲಾಗುತ್ತಿರುವ ಫುಡ್‍ಕಿಟ್‍ಗಳ ಸದುಪಯೋಗ ಪಡೆದುಕೊಳ್ಳಬೇಕು.
ಕೋವಿಡ್ ಮಹಾಮಾರಿಯನ್ನು ಮೆಟ್ಟಿನಿಲ್ಲುವ ಮೂಲಕ ಆರೋಗ್ಯವನ್ನು ಸಂರಕ್ಷಣೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಾರ್ಮಿಕರಿಗಾಗಿಯೇ ಪ್ರತ್ಯೇಕವಾದ ಆಸ್ಪತ್ರೆ ನಿರ್ಮಾಣಕ್ಕೆಂದು ಸರಕಾರಕ್ಕೆ ಸ್ಥಳೀಯ ಸ್ಥಿತಿಗತಿಗಳ ಬಗ್ಗೆ ವರದಿಯನ್ನು ಸಲ್ಲಿಸಲಾಗುವುದೆಂದರು. ಜೊತೆಗೆ ಸರಕಾರ ಈಗಾಗಲೇ ಘೋಷಣೆ ಮಾಡಿರುವ ಕೋವಿಡ್ ಪರಿಹಾರ ಮೊತ್ತವನ್ನು ಸಂಬಂಧಿಸಿದ ಫಲಾನುಭವಿಗಳಿಗೆ ಶೀಘ್ರ ತಲುಪಿಸುವ ಕೆಲಸಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.
ನೂಕುನುಗ್ಗಲು : ಕಾರ್ಮಿಕರಿಗಾಗಿ ಫುಡ್‍ಕಿಟ್‍ಗಳ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಳಗಿನಿಂದಲೇ ಸಾವಿರಾರು ಕಾರ್ಮಿಕರು ಹಾಜರಾಗಿದ್ದರು. ಸರದಿ ಸಾಲಿನಲ್ಲಿ ನಿಂತು ಕಿಟ್‍ಗಳನ್ನು ಪಡೆದುಕೊಳ್ಳುವ ಭರಾಟೆಯಲ್ಲಿ ಕೆಲಹೊತ್ತು ನೂಕುನುಗ್ಗಲು ಉಂಟಾಯಿತು.
ಸಧ್ಯಕ್ಕೆ ಲಾಕ್‍ಡೌನ್ ಸಡಿಲಿಕೆ ಆಗಿದೆಯಷ್ಟೆ. ಕೊರೊನಾ ಸಂಪೂರ್ಣವಾಗಿ ಹತೋಟಿಗೆ ಬಂದಿಲ್ಲ ಎನ್ನುವ ಕನಿಷ್ಠ ಜ್ಞಾನವನ್ನೂ ಅರ್ಥ ಮಾಡಿಕೊಳ್ಳದ ಜನ ಮಾತ್ರ ಒಬ್ಬರಿಗೊಬ್ಬರು ಅಂಟಿಕೊಂಡೇ ಸರದಿಯಲ್ಲಿ ನಿಲ್ಲುವ ಮೂಲಕ ಸಾಮಾಜಿಕ ಅಂತರವೆನ್ನುವ ನಿಯಮವನ್ನು ಗಾಳಿಗೆ ತೂರಿದ ದೃಶ್ಯ ಕಂಡುಬಂತು.
ಕಾರ್ಮಿಕ ಇಲಾಖೆ ಅಧಿಕಾರಿ ಗೋಪಾಲ ಧೂಪದ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಭೂಪನಗೌಡ ಕರಡಕಲ್, ಮುಖಂಡರಾದ ಗುಂಡಪ್ಪ ನಾಯಕ, ಮುದುಕಪ್ಪ ನೀರಲಕೇರಿ, ಯಮನಪ್ಪ ದೇಗಲಮಡಿ, ಕಟ್ಟಡ ಕಾರ್ಮಿಕ ಸಂಘಟನೆ ಪದಾಧಿಕಾರಿಗಳು ಸೇರಿ ಕಾರ್ಮಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
