ಯುವಕರ ಶ್ರಮದಿಂದ ಕಂಗೊಳಿಸುತ್ತಿರುವ ಲಿಂಗಸುಗೂರು ಖಬರಸ್ತಾನ್..! ಸಹಸ್ರ ಸಸಿ ನೆಡುವ ಮಾದರಿ ಕೆಲಸ ಶ್ಲಾಘನೀಯ : ಲಾಲಹ್ಮದ್‍ಸಾಬ
ಲಿಂಗಸುಗೂರು : ಸರಕಾರದ ಯಾವುದೇ ಅನುದಾನ, ಯೋಜನೆಗಳಿಗೆ ಕಾಯದೇ ಸಮುದಾಯದ ಬಾಂಧವರಿಂದಲೇ ದೇಣಿಗೆ ಸಂಗ್ರಹಿಸಿ ಪವಿತ್ರ ಖಬರಸ್ತಾನ್‍ದ ಒತ್ತುವರಿಯಾಗಿದ್ದ ಜಾಗೆಯನ್ನೆಲ್ಲಾ ಒಟ್ಟಾಗಿಸಿ ಸೇರಿಸಿ ಚಂದದೊಂದು ಚೌಕಟ್ಟು ಹಾಕುವ ಮೂಲಕ ವಾಯುವಿಹಾರ ತಾಣದಂತೆ ಮಾರ್ಪಾಡು ಮಾಡಿರುವ ಯುವಕರ ಕಾರ್ಯ ಶ್ಲಾಘನೀಯ. ಮುಫ್ತಿ ಸೈಯದ್ ಯೂನೂಸ್‍ಖಾಸ್ಮಿಯವರ ಮಾರ್ಗದರ್ಶನದಲ್ಲಿ ಯುವಪಡೆಯು ಕಳೆದೊಂದು ತಿಂಗಳಿಂದ ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಖಬರಸ್ತಾನ್‍ದ ಸ್ವಚ್ಛತೆ ಹಾಗೂ ಸಂದರ್ಯಿಕರಣಕ್ಕೆ ಮುಂದಾಗಿದ್ದಲ್ಲದೇ, ಇಂದು ಸಾವಿರ ಸಸಿಗಳನ್ನು ನೆಡುವ ಮೂಲಕ ಪರಿಸರ ಕಾಳಜಿಯನ್ನು ಮೆರೆದಿರುವುದು ಶ್ಲಾಘನೀಯ ಕಾರ್ಯವೆಂದು ತಂಜಿಮುಲ್ ಮುಸ್ಲಿಮೀನ್ ಕಮೀಟಿ ಅದ್ಯಕ್ಷ ಅಲ್‍ಹಾಜ್ ಲಾಲಹ್ಮದ್‍ಸಾಬ ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಥಳೀಯ ಕರಡಕಲ್ ರಸ್ತೆಯಲ್ಲಿರುವ ಖಬರಸ್ತಾನ್‍ದಲ್ಲಿ ಸಹಸ್ರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನ ಕೊನೆಯ ಹಂತವಾಗಿರುವ ಖಬರಸ್ತಾನಕ್ಕೆ ದೈವೀ ಮನೋಭಾವದಿಂದ ಬರುವಂಥಹ ವಾತಾವರಣ ನಿರ್ಮಾಣವಾಗಿರುವುದು ರಾಜ್ಯದಲ್ಲಿಯೇ ಮಾದರಿಯಾಗಿದೆ ಎನ್ನಬಹುದು. ತನು, ಮನ, ಧನದಿಂದ ಖಬರಸ್ತಾನ್ ಅಭಿವೃದ್ಧಿಗೆ ಶ್ರಮಿಸಿದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಇದೊಂದು ಮಾದರಿ ಕೆಲಸವಾಗಿದ್ದು ಜಿಲ್ಲೆಯಲ್ಲಿರುವ ಮುಸ್ಲಿಂ ಸಮುದಾಯ ಸೇರಿ ಸರ್ವ ಧರ್ಮಿಯರೂ ತಮ್ಮ ಕೊನೆಯ ಮತ್ತು ಶಾಶ್ವತ ಮನೆಯ ಜಾಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮುಂದಾಗಬೇಕೆಂದು ಕರೆ ನೀಡಿದರು.
ಸುಮಾರು ಒಂದು ತಿಂಗಳಿಗೂ ಹೆಚ್ಚಿನ ಕಾಲ ಖಬರಸ್ತಾನ್ ಅಭಿವೃದ್ಧಿಗೆ ಯುವಪಡೆ ಕೆಲಸ ಮಾಡಿದೆ. ಕೆಲವೆಡೆ ಒತ್ತುವರಿಯಾಗಿದ್ದ ಸುಮಾರು 10 ಎಕರೆಯಷ್ಟು ವಿಶಾಲವಾಗಿರುವ ಖಬರಸ್ತಾನ್ ಜಾಗೆಯನ್ನು ಖಬರಸ್ತಾನ್ ಅಭಿವೃದ್ಧಿ ಸಮೀತಿ ಸುಪರ್ದಿಗೆ ಪಡೆದು ಹದ್ದುಬಸ್ತಿ ಮಾಡಿಕೊಂಡಿದೆ. ತರಹೇವಾರಿ ಸಸಿ-ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಇಂದು ಆಯೋಜನೆ ಮಾಡಲಾಗಿದೆ. 50*50 ಅಡಿಯ ವಿಶಾಲವಾದ ಜನಾಜ ಪ್ರಾರ್ಥನೆ ಮಾಡುವ ಕಟ್ಟಯನ್ನು ನಿರ್ಮಾಣ ಮಾಡಲಾಗಿದೆ. ಬೋರ್‍ವೆಲ್ ಕೊರೆಸಿ ನೀರಿನ ಅನುಕೂಲ ಮಾಡಲಾಗಿದೆ. ಖಬರಸ್ತಾನ್‍ಗೆ ಭೇಟಿ ನೀಡುವವರಿಗೆ ವಿಶ್ರಾಂತಿಗಾಗಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ರೂಪಾತಿ ವೆಚ್ಚದಲ್ಲಿ ಖಬರಸ್ತಾನ್ ಅಭಿವೃದ್ಧಿ ಪಡಿಸಲಾಗಿದೆ. ಅಭಿವೃದ್ಧಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸಮಾಜದ ಬಾಂಧವರಿಗೆ ಅಭಿನಂದನೆಗಳು ಎಂದು ಸಮಿತಿ ಮುಖಂಡರಾದ ಮುಫ್ತಿ ಸೈಯದ್ ಯೂನೂಸ್‍ಖಾಸ್ಮಿ ಮಾತನಾಡಿದರು.
ಸಮಿತಿ ಸದಸ್ಯರಾದ ಫಯಾಜ್ ಮನಿಯಾರ್, ಅನೀಸ್‍ಪಾಷಾ, ಇಮ್ತೆಯಾಜ್‍ಪಾಷಾ, ಅಬ್ದುಲ್ ರೌಫ್ ಗ್ಯಾರಂಟಿ, ಖಾಜಾಹುಸೇನ್ ಪೂಲವಾಲೆ, ನಾಸಿರ್, ಇಬ್ರಾಹಿಂ, ಅಮೀನ್ ಗ್ಯಾರಂಟಿ, ಇರ್ಷಾದ್, ಮುಸ್ತಫಾ, ಮಹೆಬೂಬ, ಹುಸೇನ್‍ಸಾಬ ಕಮತಗಿ, ಅಜೀಮ್ ಪಟೇಲ್, ಸಿರಾಜ್, ಸಾದಿಕ್, ಮಹ್ಮದ್ ಜಹೀರುದ್ದೀನ್, ಇಮ್ರಾನ್, ಅಶ್ರಫ್‍ಹುಸೇನ್ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

