ರೈತರ ವಿರೋಧಿ ಕಾಯ್ದೆಗಳ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ
ಲಿಂಗಸುಗೂರು : ರೈತರ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ನಾನಾ ಸಂಘಟನೆಗಳ ಮುಖಂಡರು, , ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ, ಬೀಜ ಮಸೂದೆ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಸೇರಿ ಹಲವು ಕಾಯ್ದೆಗಳು ರಾಜ್ಯ ಮತ್ತು ಕೇಂದ್ರ ಸರಕಾರಗಳು ತಿದ್ದುಪಡಿ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲಾ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೊದಲು ಸಾರ್ವಜನಿಕರಿಗೆ ಮತ್ತು ರೈತರಿಗೆ ವಿಚಾರಣೆ ಮಾಡಿ, ಅಭಿಪ್ರಾಯ ಹೇಳಲು ಅವಕಾಶ ನೀಡಬೇಕೆಂದು ಸಂವಿಧಾನದಲ್ಲಿ ಉಲ್ಲೇಖವಿದ್ದಾಗ್ಯೂ ಕೇಂದ್ರ ಸರಕಾರ ಇದನ್ನು ಪರಿಗಣಿಸದೇ ಇರುವುದು ಖಂಡನೀಯ.
ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕರೋನಾದಿಂದ ಉಂಟಾಗಿರುವ ಸಂದಿಗ್ಧ ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡು, ತರಾತುರಿಯಲ್ಲಿ ಕಾನೂನುಗಳನ್ನು ತಿದ್ದುಪಡಿ ಮಾಡಿ, ದೇಶದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಸರಕಾರ ಮರಣ ಶಾಸನಗಳನ್ನು ಜಾರಿಗೊಳಿಸಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡಿರುವ ಎಲ್ಲಾ ಕಾಯ್ದೆ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕೆಂದು ರೈತರು ಒತ್ತಾಯಿಸಿದರು.
ಎಐಡಿವೈಓ, ಎಐಟಿಯುಸಿ, ಸಿಪಿಎಂ, ಬಿಎಸ್‍ಪಿ, ಕರುನಾಡ ಸೇನೆ, ಹೈದ್ರಾಬಾದ್ ಕರ್ನಾಟಕ ರೈತ ಸೇನೆ, ಆರ್‍ಕೆಎಸ್, ಕೆಪಿಆರ್‍ಎಸ್, ಭೀಮ ಆರ್ಮಿ, ಎಸ್‍ಎಫ್‍ಐ, ಇಸ್ಲಾಂ ಯೂನಿಯನ್ ಸೇರಿ ನಾನಾ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

