ಕ್ವಾರಂಟೈನ್ ಕೇಂದ್ರಕ್ಕೆ ಕಳಪೆ ಊಟ ಪೂರೈಕೆ : ಕ್ರಮಕ್ಕೆ ಕರವೇ ಆಗ್ರಹ
ಲಿಂಗಸುಗೂರು : ಪುರಸಭೆ ವ್ಯಾಪ್ತಿಯ ಕರಡಕಲ್ ಹೊರವಲಯದಲ್ಲಿರುವ ಕೋವಿಡ್ ಸೊಂಕಿತ ಕ್ವಾರಂಟೈನ್ ಕೇಂದ್ರಕ್ಕೆ ಕಳಪೆ ಗುಣಮಟ್ಟದ ಊಟ-ಉಪಹಾರ ಪೂರೈಕೆ ಮಾಡುತ್ತಿರುವ ತಾಲೂಕಾಡಳಿತದ ವಿರುದ್ಧ ಕರವೇ ಪ್ರತಿಭಟನೆ ನಡೆಸುವ ಮೂಲಕ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ತಹಸೀಲ್ದಾರ್ ಚಾಮರಾಜ ಪಾಟೀಲ್‍ರಿಗೆ ಶನಿವಾರ ಮನವಿ ಸಲ್ಲಿಸಿದ ಅವರು, ಕ್ವಾರಂಟೈನ್ ಕೇಂದ್ರದಲ್ಲಿ ಸುಮಾರು 100 ಜನ ಸೊಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ತಾಲೂಕಿನ ಹಟ್ಟಿ, ಅನ್ವರಿ, ಆನೆಹೊಸೂರು, ಕಾಳಾಪೂರ, ಗುರುಗುಂಟ, ಲಿಂಗಸುಗೂರು, ಕರಡಕಲ್ ಸೇರಿ ಹಲವು ಕಡೆಯಿಂದ ಬಂದ ಸೊಂಕಿತರನ್ನು ಕೂಡಿ ಹಾಕಲಾಗಿದೆ. ಇರುವ ಸೊಂಕಿತರಿಗೆ ಸಕಾಲಕ್ಕೆ ಊಟ ಉಪಚಾರ ಇಲ್ಲದೇ ರೋಗಿಗಳು ನರಳಾಡುವಂತಾಗಿದೆ.
ಬೆಳಗ್ಗೆ ಇಡ್ಲಿ ಸಾಂಬಾರ್, ಮಧ್ಯಾಹ್ನ ಇಡ್ಲಿ ಸಾಂಬಾರ್, ರಾತ್ರಿ ಇಡ್ಲಿ ಸಾಂಬಾರ್ ಹೇಗೆ ತಿನ್ನಬೇಕು ಕೊಟ್ಟಿದ್ದೇ ಕೊಟ್ಟಿದ್ದು. ನೀರಿನಂತ ಸಾಂಬಾರ್ ಉಪ್ಪಿಲ್ಲಾ, ಖಾರಾಇಲ್ಲ ಎಂದು ಸೊಂಕಿತರು ದೂರುತ್ತಿದ್ದಾರೆ. ಈ ಬಗ್ಗೆ ಪತ್ರಿಕೆಗಳೂ ಬೆಳಕು ಚೆಲ್ಲಿವೆ. ತಹಸೀಲ್ದಾರ್ ಅವರು ಕ್ವಾರಂಟೈನ್ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಪುರಸಭೆ ಮುಖ್ಯಾಧಿಕಾರಿಗಳೂ ಇತ್ತ ಇಣುಕಿ ನೋಡದೇ ಇರುವುದು ದುರಂತವೇ ಸರಿ.
ಕೊರೊನಾ ಮೊದಲ ಅಲೆಯಲ್ಲಿಯೂ ಕ್ವಾರಂಟೈನ್ ಕೇಂದ್ರದಲ್ಲಿ ಇರುವ ಸೊಂಕಿತರೆ ಕಳಪೆ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಲಾಗುತ್ತಿತ್ತು. ಈ ಬಗ್ಗೆ ಪ್ರತಿಭಟನೆ ಮಾಡಿದ ಬಳಿಕ ವ್ಯವಸ್ಥೆ ಸರಿಯಾಯಿತು. ಈಗಲೂ ಅದೇ ರೀತಿ ಸಮಸ್ಯೆ ಉಂಟಾಗುತ್ತಿದೆ. ಸುಮಾರು 100 ಜನ ಸೊಂಕಿತರು ಇರುವ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳೀಯರನ್ನು ಬಿಟ್ಟು ಕೇರಳ ಮೂಲದ ಹೊಟೆಲ್‍ನಲ್ಲಿ ಊಟ-ಉಪಹಾರಕ್ಕೆ ಆರ್ಡರ್ ನೀಡಲಾಗಿದೆ. ಆದರೆ, ಆ ಹೊಟೆಲ್‍ನವರು ಬೇಕಾಬಿಟ್ಟಿಯಾಗಿ ಆಹಾರ ಪೂರೈಕೆ ಮಾಡುತ್ತಿದ್ದಾರೆ. ನೀರಿನಂಥ ಸಾಂಬಾರ್, ಅರೆಬೆಂದ ಅನ್ನ, ಕೆಟ್ಟ ಮೊಟ್ಟೆ, ನೀರಾಕಿ ಕುಲುಕಿದ ಮೊಸರು ಹೀಗೆ ಉಪ್ಪು ಖಾರ ಇಲ್ಲದ ಊಟ ನೀಡಿ ಅಸ್ವಸ್ಥರ ಆರೋಗ್ಯವನ್ನು ಮತ್ತಷ್ಟೂ ಹದಗೆಡುವಂತೆ ಮಾಡುತ್ತಿದ್ದಾರೆ.
ಸರಕಾರದಿಂದ ಬರುವ ಅನುದಾನವನ್ನು ಊಟ ನೀಡಲಿಕ್ಕೂ ಸಮರ್ಪಕವಾಗಿ ಬಳಸಿಕೊಳ್ಳದೇ ಇದರಲ್ಲೂ ಕೊಳ್ಳೆ ಹೊಡೆಯುವ ಹುನ್ನಾರ ನಡೆದಿರುವುದು ಅಮಾನವೀಯ ಘಟನೆಯಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಸೊಂಕಿತರ ಆರೋಗ್ಯ ಕಾಳಜಿ ಮಾಡದೇ ಇರುವ ಆರೋಗ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಸೇರಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕರವೇ ಅದ್ಯಕ್ಷ ಜಿಲಾನಿಪಾಷಾ, ಪ್ರದಾನ ಕಾರ್ಯದರ್ಶಿ ಶಿವರಾಜ ನಾಯಕ್, ಖಜಾಂಚಿ ಅಜೀಜಪಾಷಾ ಈ ಸಂದರ್ಭದಲ್ಲಿ ಇದ್ದರು.

