ಲಿಂಗಸುಗೂರಲ್ಲಿ ನಾಲ್ಕು ಕಡೆ ತರಕಾರಿ-ಹಣ್ಣಿನ ಮಾರುಕಟ್ಟೆಗೆ ವ್ಯವಸ್ಥೆ ಪಾಸ್ ಇದ್ದವರಿಗೆ ಮಾತ್ರ ವ್ಯಾಪಾರಕ್ಕೆ ಅನುಮತಿ : ನಿಗದಿತ ದರಕ್ಕಿಂತ ಹೆಚ್ಚಿಗೆ ಮಾರಿದರೆ ಕ್ರಮ
ಲಿಂಗಸುಗೂರು : ಕೋವಿಡ್ ಎರಡನೇ ಅಲೆಯ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಭಾನುವಾರ (ಇಂದು) ಹಾಗೂ ಗುರುವಾರದಿಂದ ಪಟ್ಟಣದಲ್ಲಿ ತರಕಾರಿ, ಹಣ್ಣು ಮಾರಾಟಕ್ಕೆ ಜಾಗೆಯನ್ನು ಗುರುತಿಸಲಾಗಿದ್ದು, ವ್ಯಾಪಾರಿಗಳು ಪುರಸಭೆ ವತಿಯಿಂದ ಕಡ್ಡಾಯವಾಗಿ ಪಾಸ್ ಪಡೆದು ವ್ಯಾಪಾರ ಮಾಡಬೇಕು. ಪಾಸ್ ಇಲ್ಲದವರಿಗೆ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ. ಹಾಗೂ ಜಿಲ್ಲಾಧಿಕಾರಿಗಳು ನಿಗದಿ ಪಡಿಸಿದ ದರಕ್ಕೆ ತರಕಾರಿ-ಹಣ್ಣು ಮಾರಾಟ ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಹೇಳಿದರು.
ಸ್ಥಳೀಯ ಇಂದಿರಾ ಪಾರ್ಕ್‍ನಲ್ಲಿ ವ್ಯಾಪಾರಿಗಳಿಗೆ ಪಾಸ್ ವಿತರಣೆ ಮಾಡಿದ ಅವರು, ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು, ಕಡ್ಡಾಯವಾಗಿ ಮಾಸ್ಕ್ ಧರಿಸಿ ವ್ಯಾಪಾರ ಮಾಡಬೇಕು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಿಂಭಾಗದ ಸರಕಾರಿ ಹೈಸ್ಕೂಲ್ ಮೈದಾನ, ಕಡರಕಲ್ ರಸ್ತೆಯಲ್ಲಿರುವ ಆದರ್ಶ ಶಾಲೆಯ ಮೈದಾನ, ಬೆಂಗಳೂರು ಬೈಪಾಸ್ ರಸ್ತೆಯಲ್ಲಿನ ಮೇಘಾ ಮಾರ್ಟ್ ಎದುರಿಗಿನ ಮೈದಾನ ಹಾಗೂ ಗುಲಬರ್ಗಾ ರಸ್ತೆಯಲ್ಲಿರುವ ಸಂಗಮ ಬಾರ್ ಪಕ್ಕದ ಮೈದಾನ ಸೇರಿ ಪಟ್ಟಣದ ನಾಲ್ಕು ಕಡೆಗಳಲ್ಲಿ ಪ್ರತ್ಯೇಕವಾಗಿ ಸ್ಥಳ ಗುರುತಿಸಲಾಗಿದೆ. ಆಯಾ ಭಾಗದ ಜನರು ತಮಗೆ ಹತ್ತಿರದ ಮಾರಕಟ್ಟೆಯಲ್ಲೇ ಖರೀದಿ ಮಾಡಬೇಕು. ನಿಗದಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವ ಮೂಲಕ ಎಲ್ಲರೂ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು. ಪಾಸ್ ಪಡೆಯದೇ ಇರುವ ವ್ಯಾಪಾರಿಗಳು ತಡವಾಗಿ ಮಾರುಕಟ್ಟೆಗೆ ಬಂದರೆ, ಅಂಥವರಿಗೂ ಜಾಗೆಯನ್ನು ಅಲಾಟ್ ಮಾಡಿ ವ್ಯಾಪಾರ ಮಾಡಲು ಪಾಸ್ ನೀಡಲಾಗುವುದು. ಪಾಸ್ ಪಡೆಯುವುದು ಮಾತ್ರ ಕಡ್ಡಾಯ. ಇಲ್ಲವಾದಲ್ಲಿ ವ್ಯಾಪಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ವಿಜಯಲಕ್ಷ್ಮಿ ಹೇಳಿದರು.
ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ವ್ಯಾಪಾರಕ್ಕೆ ಅನುಮತಿ ಇರುತ್ತದೆ. ಕಿರಾಣಿ, ಮಾಂಸ ಮಾರಾಟಗಾರರು ತಮ್ಮ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮುಗಿಬೀಳುವ ಗ್ರಾಹಕ ನಿಯಂತ್ರಣಕ್ಕಾಗಿ ಸಿಬ್ಬಂಧಿಗಳನ್ನು ನೇಮಕ ಮಾಡಿಕೊಂಡು ಅಂಗಡಿಗಳ ಮುಂದೆ ಚೌಕಾಕಾರದ ಚಿಹ್ನೆಯನ್ನು ಹಾಕಿ ಆ ಸ್ಥಳದಲ್ಲಿಯೇ ಗ್ರಾಹಕರಿಗೆ ನಿಲ್ಲುವಂತೆ ಸೂಚನೆ ನೀಡಬೇಕು. ನಿಗದಿತ ಅವಧಿಯಲ್ಲಿ ವ್ಯಾಪಾರ ಮಾಡುವ ಮೂಲಕ ಸಹಕರಿಸಬೇಕು. ನಿಯಮಗಳನ್ನು ಉಲ್ಲಂಘನೆ ಮಾಡಿದ ವ್ಯಾಪಾರಿಗಳಿಗೆ ಕಾನೂನು ಪ್ರಕಾರ ದಂಡ ವಿಧಿಸುವ ಜೊತೆಗೆ ಪ್ರಕರಣ ದಾಖಲಿಸಲೂ ಹಿಂಜರಿಯುವುದಿಲ್ಲ ಎಂದು ಪಿಎಸ್‍ಐ ಪ್ರಕಾಶರೆಡ್ಡಿ ಎಚ್ಚರಿಕೆ ನೀಡಿದರು.
ಪುರಸಭೆ ಸಿಬ್ಬಂಧಿಗಳು ಹಾಗೂ ವ್ಯಾಪಾರಿಗಳು ಈ ಸಂದರ್ಭದಲ್ಲಿ ಇದ್ದರು.

