ಉಚಿತ ಲಸಿಕೆ, ಔಷಧಿ, ಆಕ್ಸಿಜನ್ ಪೂರೈಕೆಗೆ ಒತ್ತಾಯಿಸಿ ಪ್ರತಿಭಟನೆ
ಲಿಂಗಸುಗೂರು : ಕೋವಿಡ್ ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ನೀಡುವ ಜೊತೆಗೆ ಔಷಧಿ, ಆಕ್ಸಿಜನ್ ಸೇರಿ ಅಗತ್ಯ ಸವಲತ್ತುಗಳನ್ನು ಪೂರೈಕೆ ಮಾಡಬೇಕೆಂದು ಸಿಐಟಿಯು ಹಾಗೂ ಡಿವೈಎಫ್‍ಐ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ತಾಲೂಕಿನ ವೀರಾಪೂರ ಗ್ರಾಮದ ಶ್ರಮಿಕ ಭವನದ ಬಳಿ ಪ್ರತಿಭಟನೆ ಮಾಡಿದ ಕಾರ್ಯಕರ್ತರು, ಎಲ್ಲಾ ಅಸಂಘಟಿತ ಕಾರ್ಮಿಕರು, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವ ಕುಟುಂಬಗಳಿಗೆ ಮೂರು ತಿಂಗಳು 10 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಬೇಕು. ತಲಾ 10 ಕೆ.ಜಿ.ಯಂತೆ 6 ತಿಂಗಳು ಆಹಾರ ಧಾನ್ಯ ನೀಡಬೇಕು. ರೈತ ವಿರೋಧಿ ಕಾಯ್ದೆಗಳನ್ನು ಕೈಬಿಟ್ಟು ಕೃಷಿ ಉತ್ಪನ್ನಗಳಿಗೆ ಸಮರ್ಪಕವಾದ ಮಾರುಕಟ್ಟೆ, ವೈಜ್ಞಾನಿಕ ಬೆಂಬಲ ಬೆಲೆ ಮತ್ತು ಬೆಳೆ ಪರಿಹಾರ ನೀಡಬೇಕು.
ಉದ್ಯೋಗ ಖಾತ್ರಿ ಯೋಜನೆಯಡಿ 200 ಕೆಲಸದ ದಿನಗಳಿಗೆ ಕೂಲಿ ರೂಪಾಯಿ 700ಗೆ ಹೆಚ್ಚಿಸಬೇಕು. ನಗರ ಪ್ರದೇಶಕ್ಕೂ ಈ ಯೋಜನೆಯನ್ನು ವಿಸ್ತರಣೆ ಮಾಡಬೇಕು. ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತರು, ಪೌರ ಕಾರ್ಮಿಕರು ಸೇರಿದಂತೆ ಎಲ್ಲಾ ಕೋವಿಡ್ ವಾರಿಯರ್ಸ್‍ಗಳಿಗೆ ಸುರಕ್ಷಾ ವಿಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಮುಖಂಡರಾದ ರಮೇಶ ವೀರಾಪೂರ, ಗೌರಮ್ಮ ಹಿರೇಮಠ, ಬಸಮ್ಮ, ಯಲ್ಲಮ್ಮ, ಶಿವರಾಜ ಕಪಗಲ್, ನಿಂಗಪ್ಪ, ನಾಗಮ್ಮ ಕಾಟಗಲ್, ಶಾಂತಮ್ಮ ಈಚನಾಳ, ಮಂಜುನಾಥ ಗೆಜ್ಜಲಗಟ್ಟಾ ಸೇರಿ ಇತರರು ಪ್ರತಿಭಟನೆಯಲ್ಲಿ ಇದ್ದರು.

