ತಗ್ಗುತ್ತಿರುವ ಹಿನ್ನೀರು : ಕೃಷ್ಣೆಗೆ 1.50 ಲಕ್ಷ ಕ್ಯೂಸೆಕ್ ನೀರು
ಲಿಂಗಸುಗೂರು : ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಇಳಿಮುಖವಾಗುತ್ತಿರುವ ಪರಿಣಾಮ ತಾಲೂಕಿನ ಬಸವಸಾಗರ ಜಲಾಶಯಕ್ಕೆ ಬರುವ ಹಿನ್ನೀರ ಪ್ರಮಾಣದಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಕಳೆದ ವಾರ 4 ಲಕ್ಷ ಕ್ಯೂಸೆಕ್‍ಗೂ ಅಧಿಕ ನೀರನ್ನು ಹರಿಬಿಡಲಾಗಿತ್ತು. ಹಿನ್ನೀರ ಪ್ರಮಾಣ ತಗ್ಗಿದ್ದರಿಂದ ಬುಧವಾರ ಕೃಷ್ಣಾ ನದಿಗೆ 1.50 ಲಕ್ಷ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ ಎಂದು ಅಣೆಕಟ್ಟು ಮೂಲದ ಅಧಿಕಾರಿಗಳು ತಿಳಿಸಿದ್ದಾರೆ.
33.31 ಟಿಎಂಸಿ (492.25 ಮೀಟರ್) ನೀರಿನ ಸಂಗ್ರಹ ಸಾಮಥ್ರ್ಯ ಇರುವ ಜಲಾಶಯದಲ್ಲಿ ಬುಧವಾರದ ನೀರಿನ ಮಟ್ಟ 30.13 ಟಿಎಂಸಿ (491.55 ಮೀಟರ್) ಸಂಗ್ರಹವಿಟ್ಟುಕೊಂಡು ಮಿಕ್ಕ ನೀರನ್ನು ನದಿಗೆ ಕ್ರಸ್ಟ್‍ಗೇಟ್‍ಗಳ ಮೂಲಕ ಹರಿಬಿಡಲಾಗುತ್ತಿದೆ. ಒಟ್ಟಾರೆ ನೀರಿನ ಸಂಗ್ರಹ ಪ್ರಮಾಣದಲ್ಲಿ ಶೇ.90.45ರಷ್ಟು ನೀರು ಸಧ್ಯಕ್ಕೆ ಬಸವಸಾಗರ ಜಲಾಶಯದಲ್ಲಿದೆ.
ಕೃಷ್ಣಾ ನದಿತೀರದ ನಡುಗಡ್ಡೆ ಪ್ರದೇಶಗಳಿಗೆ ಈಗಾಗಲೇ ಜಿಲ್ಲಾಡಳಿತ, ತಾಲೂಕಾಡಳಿತ, ಶಾಸಕರು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಅಗತ್ಯ ಸವಲತ್ತುಗಳನ್ನು ನೀಡುವ ಮೂಲಕ ಸಂತ್ರಸ್ಥರಿಗೆ ಶಾಶ್ವತ ಪರಿಹಾರದ ಭರವಸೆಯನ್ನೂ ನೀಡಿದ್ದಾರೆ. ಪ್ರತಿವರ್ಷ ಪ್ರವಾಹ ಬಂದಾಗ ಕೊಡುವ ಭರವಸೆಯಂತೆ ಈ ಬಾರಿಯೂ ಹೇಳಿರುವ ಮಾತು ಕೇವಲ ಹೇಳಿಕೆಯಾಗದೇ, ವರ್ಷಾಂತ್ಯದೊಳಗೆ ಈಡೇರಿಸಬೇಕೆನ್ನುವುದು ಸಂತ್ರಸ್ಥರ ಒತ್ತಾಯವಾಗಿದೆ.

