ಪಂಚಾಯಿತಿ ಮಟ್ಟದಲ್ಲಿ ಮನೆ-ಮನೆಗೆ ಸಹಾಯಕ ಆಯುಕ್ತರ ಭೇಟಿ : ಜಾಗೃತಿ
ಲಿಂಗಸುಗೂರು : ತಾಲೂಕಿನ ನಾಗರಹಾಳ ಮತ್ತು ಆಮದಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮನೆ-ಮನೆಗೆ ಭೇಟಿ ನೀಡುವ ಮೂಲಕ ಸಹಾಯಕ ಆಯುಕ್ತ ರಾಜಶೇಖರ ಡಂಬಳ್ ಜನರಲ್ಲಿ ಜಾಗೃತಿ ಮೂಡಿಸಿದರು.
ಜಿಲ್ಲಾಧಿಕಾರಿಗಳ ಆದೇಶದಂತೆ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಜಾಗೃತಿ ಮೂಡಿಸಲು ಟಾಸ್ಕ್‍ಫೋರ್ಸ್ ಸಮಿತಿಗಳನ್ನು ರಚನೆ ಮಾಡಲಾಗಿದೆ. ಸೊಂಕು ಲಕ್ಷಣ ಇರುವ ಜನರಿಗೆ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಆರೈಕೆ ಮಾಡುವುದು, ಆಸ್ಪತ್ರೆಗಳಿಗೆ ಕಳುಹಿಸುವುದು, ಪ್ರತ್ಯೇಕವಾಗಿ ಕ್ವಾರಂಟೈನ್‍ಗೆ ಸೂಚನೆ ನೀಡುವುದು, ಮನೆಗಳಲ್ಲಿ ಕ್ವಾರಂಟೈನ್‍ಗೆ ಅನುಕೂಲ ಇಲ್ಲದಿದ್ದರೆ ಅಂಥವರವನ್ನು ನಿಗದಿತ ಕೋವಿಡ್ ಕೇರ್ ಸೆಂಟರ್‍ಗಳಿಗೆ ಕಳುಹಿಸುವುದು ಸೇರಿ ಜನರ ಆರೋಗ್ಯ ರಕ್ಷಣೆಯತ್ತ ಒತ್ತು ನೀಡಬೇಕು. ಜೊತೆಗೆ ಜನರೂ ಸಹಕಾರ ನೀಡಬೇಕು. ಮನೆಗಳಿಂದ ವಿನಾಕಾರಣ ಹೊರಗೆ ಬಾರದೇ ಕಡ್ಡಾಯವಾಗಿ ಮಾಸ್ಕ್ ಹಾಕುವ ಮೂಲಕ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂದು ಆಯುಕ್ತರು ಜಾಗೃತಿ ಮೂಡಿಸಿದರು.
ಪಟ್ಟಣ-ನಗರ ಪ್ರದೇಶಗಳಿಗಿಂತ ಹಳ್ಳಿಗಳಲ್ಲಿ ಕೋವಿಡ್ ಸೊಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಗಳನ್ನು ಸುರಕ್ಷಿತ ಮಾಡಲು ಸರಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ತಾಲೂಕಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಧಿಕಾರಿಗಳ ತಂಡ ಪ್ರತಿ ಹಳ್ಳಿಗೂ ಭೇಟಿ ನೀಡುವ ಮೂಲಕ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಸೇರಿ ಪಂಚಾಯತ್ ಸಿಬ್ಬಂಧಿಗಳು ಈ ಸಂದರ್ಭದಲ್ಲಿ ಇದ್ದರು.

