2.10 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ
ಲಿಂಗಸುಗೂರು : 2019-20ನೇ ಸಾಲಿನ ಕೆಕೆಆರ್‍ಡಿಬಿ ಯೋಜನೆಯಡಿ ತಾಲೂಕಿನ ಈಚನಾಳ ಗ್ರಾಮದಲ್ಲಿ 90 ಲಕ್ಷ ರೂಪಾಯಿ, ನೀರಲಕೇರಿ ಕ್ರಾಸ್‍ನಿಂದ ಈಚನಾಳ ಗ್ರಾಮದವರೆಗೆ 80 ಲಕ್ಷ ರೂಪಾಯಿ ಮತ್ತು ಈಚನಾಳ ಗ್ರಾಮದಿಂದ ತೊರಲಬೆಂಚಿ ಗ್ರಾಮದವರೆಗೆ 40 ಲಕ್ಷ ರೂಪಾಯಿ ಸೇರಿ ಒಟ್ಟು 2.10 ಕೋಟಿ ರೂಪಾಯಿಗಳ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಶಾಸಕ ಡಿ.ಎಸ್.ಹೂಲಗೇರಿ ಶನಿವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು, ರಾಜ್ಯದ ಬಿಜೆಪಿ ಸರ್ಕಾರ ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡುವಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಈಗಾಗಲೇ ಶಾಲಾ-ಕಾಲೇಜುಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು.
ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗಾಗಿ ಹೈಟೆಕ್ ಶೌಚಾಲಯ ನಿರ್ಮಾಣ ಮತ್ತು ರಸ್ತೆಗಳ ದುರಸ್ತಿಗೆ ಆದ್ಯತೆ ನೀಡಲಾಗುವುದು. ಕರಡಕಲ್ ಕೆರೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಗುಣಮಟ್ಟದ ಕಾಮಗಾರಿಗೆ ಗಮನ ಹರಿಸಲು ಅಧಿಕಾರಿಗಳು ಸೂಚಿಸಲಾಗಿದೆ. ಅಲ್ಲದೇ ರಸ್ತೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಸಾರ್ವಜನಿಕರಿಂದ ದೂರು ಬಾರಂದತೆ ಎಚ್ಚರಿಕೆಯಿಂದ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕೆಂದು ತಾಕೀತು ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಪಾಟೀಲ್, ಜಿಪಂ ಸದಸ್ಯ ಸಂಗಣ್ಣ ದೇಸಾಯಿ, ಜಿಪಂ ಎಇಇ ಶಿವಕುಮಾರ, ಮುಖಂಡರಾದ ಶರಣಪ್ಪ ಮೇಟಿ, ಬಿ.ಆರ್.ಮೇಟಿ, ಪಾಮಯ್ಯ ಮುರಾರಿ, ಮುದುಕಪ್ಪ ವಕೀಲ, ಬಸನಗೌಡ ಮೇಟಿ, ವೆಂಕಟೇಶ ರಾಠೋಡ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.

