ಪಾಸ್ ನೀಡಿದರೂ ಬಸ್‍ಗಳು ಬರುತ್ತಿಲ್ಲ : ವಿದ್ಯಾರ್ಥಿಗಳ ಪ್ರತಿಭಟನೆ
ಲಿಂಗಸುಗೂರು : ಕಳೆದ ಒಂದು ವಾರದ ಹಿಂದೆ ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ ಮಾಡಿರುವ ಸಾರಿಗೆ ಸಂಸ್ಥೆ ಸಕಾಲಕ್ಕೆ ಬಸ್‍ಗಳನ್ನು ಬಿಡದೇ ಇರುವ ಪರಿಣಾಮ ವಿದ್ಯಾರ್ಥಿಗಳ ಕಲಿಕೆಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಶಾಲಾ-ಕಾಲೇಜು ಸಮಯಕ್ಕೆ ಸರಿಯಾಗಿ ಬಸ್‍ಗಳ ವ್ಯವಸ್ಥೆ ಮಾಡಬೇಕೆಂದು ವಿದ್ಯಾರ್ಥಿಗಳು ಸಾರಿಗೆ ಘಟಕದ ಬಳಿ ಪ್ರತಿಭಟನೆ ಮಾಡಿದರು.
ತಾಲೂಕಿನ ಕಾಳಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ಸಮಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಮುಖಂಡ ಅಮರೇಶ ನಾಡಗೌಡರ ನೇತೃತ್ವದಲ್ಲಿ ಸ್ಥಳೀಯ ಸಾರಿಗೆ ಘಟಕದ ಬಳಿ ವಿದ್ಯಾರ್ಥಿಗಳು, ಕಾಳಾಪೂರ, ಪೂಲಭಾವಿ, ಪೂಲಭಾವಿ ತಾಂಡಾ ಸೇರಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿತ್ಯ ಲಿಂಗಸುಗೂರು ಪಟ್ಟಣಕ್ಕೆ ಶಾಲಾ-ಕಾಲೇಜುಗಳಿಗೆ ಕಲಿಯಲು ಬರುತ್ತಾರೆ. ಕಳೆದ ಒಂದು ವಾರದ ಹಿಂದೆಯೇ ವಿದ್ಯಾರ್ಥಿಗಳಿಗೆ ಬಸ್‍ಪಾಸ್‍ಗಳನ್ನು ವಿತರಣೆ ಮಾಡಲಾಗಿದೆ. ಆದರೆ, ಸಾರಿಗೆ ಬಸ್‍ಗಳು ಮಾತ್ರ ಸಕಾಲಕ್ಕೆ ಗ್ರಾಮಗಳಿಗೆ ಬರುತ್ತಿಲ್ಲ ಎಂದು ಆರೋಪಿಸಿದ ವಿದ್ಯಾರ್ಥಿಗಳು, ಶಾಲಾ-ಕಾಲೇಜು ಸಮಯಕ್ಕೆ ಸರಿಯಾಗಿ ಬೆಳಗ್ಗೆ ಮತ್ತು ಸಾಯಂಕಾಲ ಬಸ್‍ಗಳ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಮುಖಂಡರಾದ ವಿಜಯಕುಮಾರ, ನಾಗಪ್ಪ ಪೂಲಭಾವಿ, ಮಹದೇವಪ್ಪ, ಕುಪ್ಪಣ್ಣ ಸೇರಿ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಇದ್ದರು.

