ವಿಜಯಪುರ

ಕೋವಿಡ್ ತಡೆಗೆ ಚುನಾಯಿತ ಪ್ರತಿನಿಧಿಗಳ ಅನುದಾನ ಬಳಕೆಗೆ ಆಲ್ಕೋಡ್ ಒತ್ತಾಯ

ಲಿಂಗಸುಗೂರು : ರಾಜ್ಯದಲ್ಲಿ ಉಲ್ಬಣವಾಗುತ್ತಿರುವ ಕೋವಿಡ್ ಎರಡನೇ ಅಲೆಯನ್ನು ಕಟ್ಟಿಹಾಕಲು ಸರಕಾರ ಸಮರೋಪಾದಿಯಲ್ಲಿ ಕೆಲಸಕ್ಕೆ ಮುಂದಾಗಬೇಕು. ಸತತ ಲಾಕ್‍ಡೌನ್‍ನಿಂದ ಕಂಗೆಟ್ಟು ಜೀವನ ನಿರ್ವಹಣೆಗೆ ಪರಿತಪಿಸುತ್ತಿರುವ ಜನರ ಬದುಕನ್ನು ಕಟ್ಟಲು ಸರಕಾರ ಕೂಡಲೇ ಶಾಸಕ, ಸಂಸದ, ಸಚಿವ, ವಿಧಾನ ಪರಿಷತ್ ಸದಸ್ಯರ ಅನುದಾನವನ್ನು ಬಳಕೆ ಮಾಡಿಕೊಂಡು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಹನುಮಂತಪ್ಪ ಆಲ್ಕೋಡ್ ಒತ್ತಾಯಿಸಿದ್ದಾರೆ.


ಈ ಬಗ್ಗೆ ಮಂಗಳವಾರ ಪ್ರಕಟಣೆ ನೀಡಿರುವ ಅವರು, ಕೋವಿಡ್ ಸಂಕಷ್ಟವನ್ನು ಸಮರ್ಥವಾಗಿ ಎದುರಿಸುತ್ತಿರುವ ಜಿಲ್ಲಾಡಳಿತ ಜಿಲ್ಲೆಯ ಜನರ ಬದುಕನ್ನು ರಕ್ಷಣೆ ಮಾಡಲು ಜಿಲ್ಲೆಯ ಜನಪ್ರತಿನಿಧಿಗಳ ಸಭೆಯನ್ನು ಕರೆದು ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚಿಸಬೇಕು. ಜನಪ್ರತಿನಿಧಿಗಳ ಅನುದಾನವನ್ನು ಬಳಸಿಕೊಂಡು ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳೂ ಸೇರಿ ಅವಶ್ಯಕತೆ ಇರುವ ಗ್ರಾಮ ಪಂಚಾಯತ್ ಮಟ್ಟದಲ್ಲೂ ಕೋವಿಡ್ ಕೇರ್ ಸೆಂಟರ್‍ಗಳನ್ನು ಆರಂಭಿಸಬೇಕು. ಅರೋಗ್ಯ ರಕ್ಷಣೆಗಾಗಿ ಬೇಕಾಗುವ ಆಕ್ಸಿಜನ್, ಔಷಧ, ಬೆಡ್‍ಗಳ ವ್ಯವಸ್ಥೆ ಮಾಡಬೇಕು. ಸಮರ್ಪಕವಾದ ಸಿಬ್ಬಂಧಿಗಳನ್ನು ಆಯಾ ಕೇಂದ್ರಗಳಿಗೆ ನಿಯೋಜನೆ ಮಾಡಬೇಕು ಎಂದರು.


ಜಿಲ್ಲಾ ಮಟ್ಟದ ಆಸ್ಪತ್ರೆಗಳು ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿವೆ. ಗ್ರಾಮೀಣ ಪ್ರದೇಶದ ಜನರು ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸಮಸ್ಯೆ ಇನ್ನಷ್ಟು ಜಟಿಲವಾಗುವ ಸಾಧ್ಯತೆಗಳಿವೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಗ್ರಾಮೀಣ ಮಟ್ಟದಲ್ಲಿ ಚಿಕಿತ್ಸೆಗೆ ಅನುಕೂಲ ಮಾಡಿಕೊಡುವತ್ತ ಮುಂದಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ನಿರಂತರವಾಗಿ ಜಿಲ್ಲಾಡಳಿತದ ಸಂಪರ್ಕದಲ್ಲಿದ್ದುಕೊಂಡು ಜನರ ಆರೋಗ್ಯ ಕಾಪಾಡುವ ಜವಾಬ್ದಾರಿ ಹೊರಬೇಕು. ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರು, ಅಧಿಕಾರಿಗಳ ಸಭೆ ಕರೆದು ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಜನರಿಗೆ ಧೈರ್ಯ ತುಂಬುವ ಕೆಲಸಕ್ಕೆ ಮುಂದಾಗಬೇಕೆಂದು ಆಲ್ಕೋಡ್ ಸಲಹೆ ನೀಡಿದರು.


ಈಗಾಗಲೇ ರಾಜ್ಯ ಸರಕಾರ ಘೋಷಣೆ ಮಾಡಿರುವ ಆರ್ಥಿಕ ಪ್ಯಾಕೇಜ್ ಅವೈಜ್ಞಾನಿಕವಾಗಿದೆ. ಕೂಡಲೇ ಸರಕಾರ ಮರುಪರಿಶೀಲನೆ ಮಾಡಿ ಹೆಚ್ಚಿನ ಸಹಾಯಕ್ಕೆ ಮುಂದಾಗಬೇಕೆಂದು ಮಾಜಿ ಸಚಿವರು ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!