ರಾಯಚೂರು

ಲಿಂಗಸುಗೂರು ಪುರಸಭೆ ಉಪಾದ್ಯಕ್ಷ-ಸ್ಥಾಯಿ ಸಮಿತಿ ಅದ್ಯಕ್ಷರ ಜಂಟಿ ಪತ್ರಿಕಾಗೋಷ್ಠಿ ಚುನಾವಣೆಗೆ ಸೀಮಿತವಾದ ಸಿದ್ದು ಬಂಡಿಯವರದ್ದು ನಾಟಕ ಕಂಪನಿ : ಆರೋಪ

ಲಿಂಗಸುಗೂರು : ವರ್ಷಕ್ಕೊಮ್ಮೆ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಜಾತ್ರೆಗಳಲ್ಲಿ ಬರುವ ನಾಟಕ ಕಂಪನಿಗಳಂತೆ, ಕ್ಷೇತ್ರದಲ್ಲಿ ಚುನಾವಣೆ ಬಂದ ಸಂದರ್ಭಗಳಲ್ಲಿ ಜನರ ಮೇಲೆ ಇನ್ನಿಲ್ಲದ ಮಮಕಾರ ಹುಟ್ಟಿಸಿಕೊಂಡು ಮೊಸಳೆ ಕಣ್ಣೀರು ಹಾಕುತ್ತಾ ಬರುವ ಜೆಡಿಎಸ್ ಮುಖಂಡ ಸಿದ್ದು ಬಂಡಿಯವರದ್ದು ನಾಟಕ ಕಂಪನಿ ಇದ್ದಂತೆ ಎಂದು ಪುರಸಭೆ ಉಪಾದ್ಯಕ್ಷ ಮಹ್ಮದ್ ರಫಿ ಆರೋಪಿಸಿದರು.


ಸ್ಥಳೀಯ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಡಿ.ಎಸ್.ಹೂಲಗೇರಿಯವರು ಕ್ಷೇತ್ರದಲ್ಲಿ ಬಿಡುವಿಲ್ಲದೇ ಓಡಾಡಿ ಜನಪರವಾದ ಕೆಲಸ-ಕಾರ್ಯಗಳನ್ನು ಮಾಡುತ್ತಿದ್ದಾರೆ. ತಾಲೂಕಿನ ಹಟ್ಟಿ ಚಿನ್ನದಗಣಿಯಲ್ಲಿ 100 ಬೆಡ್‍ಗಳ ಕೋವಿಡ್ ಆಸ್ಪತ್ರೆ ಆರಂಭ, ಲಿಂಗಸುಗೂರು ಪಟ್ಟಣದಲ್ಲಿ 30 ಬೆಡ್‍ಗಳ ಕವಿಡ್ ಆಸ್ಪತ್ರೆ ಆರಂಭ, ನಾಲ್ಕಾರು ಖಾಸಗಿ ಆಸ್ಪತ್ರೆಗಳಿಗೆ ಕೋವಡ್ ಸೆಂಟರ್ ಮಾಡಲು ಪರವಾನಿಗೆ ಕೊಡಿಸುವ ಜೊತೆಗೆ ಭೀಮ್ ಆರ್ಮಿ ಸಂಘಟನೆ ಕಾರ್ಯಕರ್ತರ ಜೊತೆಗೆ ಪ್ರತಿನಿತ್ಯ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಊಟದ ಪೊಟ್ಟಣಗಳನ್ನು ವಿತರಿಸಲು ವ್ಯವಸ್ಥೆ ಮಾಡುವ ಮೂಲಕ ಶಾಸಕರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಇದ್ಯಾವುದನ್ನೂ ಗಮನಿಸದೇ ನಾಟಕ ಕಂಪನಿಗಳು ಬಂದು ಹೋದಂತೆ ತಿಳಿದಾಗೊಮ್ಮೆ ಕ್ಷೇತ್ರಕ್ಕೆ ಬಂದು ಹಿಂದೆಮುಂದೆ ನೋಡದೇ ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವುದು ಬಂಡಿಯವರಿಗೆ ಶೋಭೆ ತರುವುದಿಲ್ಲ.

ನಾಟಕೀಯ ಮಾತುಗಳನ್ನಾಡದೇ ಕ್ಷೇತ್ರದ ಜನರ ಬಗ್ಗೆ ನಿಜವಾಗಿಯೂ ಬಂಡಿವರಿಗೆ ಕಾಳನಿ ಇದ್ದರೆ, ಮುಂದೆ ನಿಂತು ಸಹಾಯ ಸಹಕಾರ ನೀಡಲಿ ಎಂದು ಸವಾಲು ಹಾಕಿದರು.
ಗ್ರಾಮೀಣ ಪ್ರದೇಶಗಳಿಗೆ ತೆರಳಿ ಜನರ ಯೋಗ ಕ್ಷೇಮ ವಿಚಾರಿಸುವ ಜೊತೆಗೆ ಅವರ ಬೇಕು-ಬೇಡಗಳಿಗೆ ಸಹಾಯ ಸಹಕಾರ ಮಾಡುತ್ತಿರುವ ಶಾಸಕ ಹೋಲಗೇರಿಯವರ ಕಾರ್ಯಗಳು ಬಂಡಿಯವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಅವರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇನ್ನು ಮುಂದೆ ಬಂಡಿಯವರು ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕೆಂದು ಹೇಳಿದರು. ಮಾಜಿ ಶಾಸಕರು ಕೋವಿಡ್ ಸಂದರ್ಭದಲ್ಲಿ ಜನರ ಸಹಾಯಕ್ಕೆ ಬಾರದೇ ಮಾಯವಾಗಿದ್ದಾರೆಂದು ರಫಿ ವ್ಯಂಗ್ಯವಾಡಿದರು.


ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಂಜೂರಾತಿ ಪಡೆಯದೇ ಅಧ್ಯಕ್ಷರಿಂದ ಸಹಿ ಪಡೆದು ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರು 11 ಲೇಔಟ್‍ಗಳ ಫೈಲ್‍ಗಳನ್ನು ಮಂಜೂರಾತಿಗೆ ಕಳುಹಿಸಿದ್ದಾರೆ. ಸಕಾರಣವಿಲ್ಲದೇ 54 ಕಟ್ಟಡ ಪರವಾನಿಗೆಗಳನ್ನು ತಿರಸ್ಕರಿಸಿದ್ದಾರೆ. ಸದಸ್ಯರು ಆಡಳಿತ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಮುಖ್ಯಾಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಸ್ಥಾಯಿ ಸಮಿತಿ ಅದ್ಯಕ್ಷ ಪ್ರಮೋದ ಕುಲಕರ್ಣಿ ಹೇಳಿದರು.


ಸದಸ್ಯರು ಮುಖ್ಯಾಧಿಕಾರಿಗೆ ಸ್ಪಂಧಿಸುತ್ತಿಲ್ಲ ಎನ್ನುವುದನ್ನು ದಾಖಲೆ ಸಮೇತ ಸಾಬೀತು ಪಡಿಸಿದರೆ ನಾವು ರಾಜೀನಾಮೆ ನೀಡಲು ಸಿದ್ಧರಾಗಿದ್ದೇವೆ. ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸುವುದೇ ಮುಖ್ಯಾಧಿಕಾರಿಗಳ ಕೆಲಸವಾಗಿದೆ. ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲಿ ಜಂಗಲ್ ಕಟಿಂಗ್, ಚರಂಡಿಗಳು ಹೂಳು ತುಂಬಿ ರಸ್ತೆಗೆ ಕಲುಶಿತ ನೀರು ಹರಿಯುತ್ತಿದ್ದರೂ ಮುಖ್ಯಾಧಿಕಾರಿಗಳು ಗಮನ ಹರಿಸುತ್ತಿಲ್ಲ. ಸದಸ್ಯರು ಹೇಳಿದ ಮಾತಿಗೂ ಕಿಮ್ಮತ್ತು ನೀಡದೇ ತಮ್ಮದೇ ಕಾರುಬಾರು ನಡೆಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಜಿಲ್ಲಾಧಿಕಾರಿಗಳೂ ಮುಖ್ಯಾಧಿಕಾರಿಗಳ ಭ್ರಷ್ಟತನಕ್ಕೆ ರಕ್ಷಣೆ ನೀಡುತ್ತಿದ್ದಾರೆಯೇ? ಎನ್ನುವ ಅನುಮಾನಗಳು ನಮ್ಮಲ್ಲಿ ಮೂಡುತ್ತಿವೆ ಎಂದು ಪ್ರಮೋದ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು.


ಪುರಸಭೆ ಸದಸ್ಯರಾದ ಯಮನಪ್ಪ ದೇಗಲಮಡಿ, ಬಾಬುರೆಡ್ಡಿ ಮುನ್ನೂರು, ರುದ್ರಪ್ಪ ಬ್ಯಾಗಿ, ಯಮನಪ್ಪಗೌಡ(ಮುತ್ತು) ಮೇಟಿ, ಭೀಮ ಆರ್ಮಿ ಗೌರವಅದ್ಯಕ್ಷ ಖಾಲಿದ್ ಚಾವೂಸ್ ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!