ರಾಯಚೂರು

2.18 ಕೋಟಿ ರೂಪಾಯಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

ಲಿಂಗಸುಗೂರು : ರಸ್ತೆ, ಗ್ರಂಥಾಲಯ ಕಟ್ಟಡ, ಬಸ್ ತಂಗುದಾಣ ಸೇರಿ 2.18 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ಎಸ್.ಹೂಲಗೇರಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.


ಕೆ.ಆರ್.ಆರ್.ಡಿ.ಎನ ಎಸ್.ಡಿ.ಪಿ ಯೋಜನೆಯಡಿ ತಾಲೂಕಿನ ರಾಂಪೂರ ಗ್ರಾಮದಿಂದ ಅಡವಿಭಾವಿ ಕ್ರಾಸ್‍ವರೆಗೆ 75 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ, 2019-20ನೇ ಸಾಲಿನ ಕೆ.ಕೆ.ಆರ್.ಡಿ.ಬಿ. ಯೋಜನೆಯಡಿಯಲ್ಲಿ ಹನುಮಗುಡ್ಡ ಗ್ರಾಮದಿಂದ ಆನೆಹೊಸೂರು ಗ್ರಾಮದವರೆಗೆ 120 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ, ಚಿತಾಪೂರ ಗ್ರಾಮದಲ್ಲಿ 15 ಲಕ್ಷ ರೂಪಾಯಿ ಮೊತ್ತದ ಸುಸಜ್ಜಿತ ಗ್ರಂಥಾಲಯ ಕಟ್ಟಡ, 2019-20ನೇ ಸಾಲಿನ ಶಾಸಕರ ಸ್ಥಳೀಯ ಅಭಿವೃದ್ಧಿ ಯೋಜನೆಯಡಿ ಸುಣಕಲ್ ಗ್ರಾಮದಲ್ಲಿ ಅಂದಾಜು ಮೊತ್ತ 8 ಲಕ್ಷ ರೂಪಾಯಿಗಳಲ್ಲಿ ಬಸ್ ತಂಗುದಾಣ ಕಾಮಗಾರಿಗಳಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.


ಬಳಿಕ ಮಾತನಾಡಿದ ಅವರು, ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಮಾಡಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.


ಜಿ.ಪಂ. ಸದಸ್ಯ ಸಂಗಣ್ಣ ದೇಸಾಯಿ, ಬಸನಗೌಡ ಕಂಬಳಿ, ತಾ.ಪಂ. ಸದಸ್ಯ ವಾಹಿದ್ ಖಾದ್ರಿ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಭೂಪನಗೌಡ ಕರಡಕಲ್, ಪುರಸಭೆ ಉಪಾದ್ಯಕ್ಷ ಮೊಹ್ಮದ್ ರಫಿ ಸೇರಿ ಮುಖಂಡರು ಇದ್ದರು.

Leave a Reply

Your email address will not be published. Required fields are marked *

error: Content is protected !!