ತುಕ್ಕು ಹಿಡಿದ ಜೋಡಿ ಗೋದಾಮುಗಳ ರಕ್ಷಣೆಗೆ ಯಾರು ಹೊಣೆ..?
ಖಾಜಾಹುಸೇನ್
ಲಿಂಗಸುಗೂರು : ಸಾರ್ವಜನಿಕರಿಗೆ ಹಂಚುವ ಪಡಿತರ ಧಾನ್ಯ ಸಂಗ್ರಹಿಸಲು ದಶಕಗಳ ಹಿಂದೆ ನಿರ್ಮಾಣ ಮಾಡಿದ್ದ ಎರಡು ಬೃಹತ್ ಗೋದಾಮುಗಳು ನಿರ್ವಹಣೆ ಇಲ್ಲದೇ ತುಕ್ಕು ಹಿಡಿಯುತ್ತಿದ್ದು, ಆಹಾರ ಧಾನ್ಯಗಳ ಸಂಗ್ರಹಣೆ ಇಲ್ಲದೇ ಶೆಡ್‍ಗಳು ಅನೈತಿಕ ಚಟುವಟಿಕೆಗಳ ತಾಣವಾಗಿವೆ. ಇವುಗಳ ರಕ್ಷಣೆ, ದೇಖರೇಕಿ ಮಾಡುವವರು ಯಾರು..? ಎನ್ನುವ ಪ್ರಶ್ನೆಗಳಿಗೆ ಮಾತ್ರ ಉತ್ತರ ಇಲ್ಲದಂತಾಗಿದೆ.
ದಶಕಗಳ ಹಿಂದೆ ಸವಲತ್ತುಗಳು ಕಡಿಮೆ ಇದ್ದ ಕಾರಣ ಸರಕಾರದಿಂದ ಟೀನ್‍ಶೆಡ್‍ಗಳನ್ನು ಹಾಕಿ ಎರಡು ಜೋಡಿ ಗೋದಾಮುಗಳನ್ನು ನಿರ್ಮಿಸಲಾಗಿತ್ತು. ಸಾವಿರಾರು ಚೀಲಗಳನ್ನು ಇಲ್ಲಿ ಸಂಗ್ರಹಿಸಿಡಲಾಗುತ್ತಿತ್ತು. ಗೋದಾಮಿನ ಸುತ್ತಮುತ್ತ ಮನೆಗಳು ನಿರ್ಮಾಣವಾಗಿದ್ದು, ಆಹಾರ ಧಾನ್ಯಗಳನ್ನು ಹೊತ್ತು ತರುವ ಲಾರಿಗಳು ಸ್ಥಳಕ್ಕೆ ಬಾರದಂಥಹ ಇಕ್ಕಟ್ಟಾದ ರಸ್ತೆ ಇರುವ ಪರಿಣಾಮ ಹಲವು ವರ್ಷಗಳಿಂದ ಇವುಗಳಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಆಹಾರ ಇಲಾಖೆಗೆ ಸಂಬಂಧಿಸಿದ್ದರೂ, ನಿರ್ವಹಣೆಗೆ ಮುಂದಾಗದೇ ಇರುವ ಕ್ರಮಕ್ಕೆ ಜನರಲ್ಲಿ ಬೇಸರ ವ್ಯಕ್ತವಾಗಿದೆ.
ಆಹಾರ ಇಲಾಖೆ ಸುಪರ್ದಿಯಲ್ಲಿರುವ ಈ ಗೋದಾಮುಗಳನ್ನು ಕಂದಾಯ ಇಲಾಖೆ ತನ್ನ ವ್ಯಾಪ್ತಿಗೆ ತೆಗೆದುಕೊಂಡು, ಪಡಿತರ ದಾಸ್ತಾನು ಮಾಡಲು ಬೇರೆಕಡೆ ಸ್ಥಳ ನೀಡಬೇಕೆನ್ನುವ ಕೂಗು ಕೇಳಿ ಬರುತ್ತಿದೆ. ತಾಲೂಕಾಡಳಿತ ಈ ಬಗ್ಗೆ ಕೂಡಲೇ ಪರಿಶೀಲನೆಗೆ ಮುಂದಾಗಿ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕಿದೆ.
ಗೋದಾಮುಗಳ ಸುತ್ತಮುತ್ತ ಜನವಸತಿ ಇರುವ ಪರಿಣಾಮ ಬೇರೆಕಡೆಗೆ ಸಂಗ್ರಹ ಗೋದಾಮುಗಳನ್ನು ಸ್ಥಳಾಂತರ ಮಾಡಬೇಕು. ಈಗಾಗಲೇ ಎಪಿಎಂಸಿ ಯಾರ್ಡ್‍ನಲ್ಲಿರುವ ಗೋದಾಮುಗಳಲ್ಲಿ ದಾಸ್ತಾನು ಸಂಗ್ರಹಿಸಲಾಗುತ್ತಿದೆ. ತುಕ್ಕು ಹಿಡಿದ ಶೆಡ್‍ಗಳ ಸ್ಥಳ ಬದಲಾವಣೆ ಬಗ್ಗೆ ಮೇಲಧಿಕಾರಿಗಳು ಕ್ರಮಕ್ಕೆ ಮುಂದಾಗುವರೇ..? ಕಾದು ನೋಡೋಣ.
ಲಿಂಗಸುಗೂರು ಪಟ್ಟಣದ ಸಂತೆ ಬಜಾರ್ ಪಕ್ಕದಲ್ಲಿರುವ ಆಹಾರ ಇಲಾಖೆ ಗೋದಾಮಿಗೆ ಹೋಗಲು ಇಕ್ಕಟ್ಟಾಗಿರುವ ರಸ್ತೆ ಇದೆ. ಅಲ್ಲದೇ, ಎಂಟತ್ತು ವರ್ಷಗಳಿಂದ ಗೋದಾಮು ಬಳಕೆಯಾಗದೇ ನಿರುಪಯುಕ್ತವಾಗಿವೆ. ಆಹಾರ ಇಲಾಖೆ ಅಧಿಕಾರಿಗಳು ಇತ್ತ ಕಣ್ಣಾಯಿಸುತ್ತಿಲ್ಲ. ಇನ್ನಾದರೂ ಸಹಾಯಕ ಆಯುಕ್ತರು ಇಲ್ಲಿಗೆ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು. — ತಿಮ್ಮಾರೆಡ್ಡಿ ಮುನ್ನೂರು, ನಮ್ಮ ಕರವೇ ಅದ್ಯಕ್ಷ.

