ಲಿಂಗಸುಗೂರು : ಸರಕಾರಿ ಪ್ರೌಢಶಾಲೆಯಲ್ಲಿ ‘ನನಗಲ್ಲ ನಿನಗೆ’ ಕಾರ್ಯಕ್ರಮ
ಲಿಂಗಸುಗೂರು : ಮಕ್ಕಳಲ್ಲಿ ಸೇವಾ ಮನೋಭಾವ ಮೂಡಲು ಹಾಗೂ ನಿಸ್ವಾರ್ಥ ಮನೋಭಾವ ಬೆಳೆಸಿಕೊಳ್ಳಲು ‘ನನಗಲ್ಲ ನಿನಗೆ’ ಹೆಸರಿನಡಿ ಸ್ಥಳೀಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ್, ಎನ್.ಎಸ್.ಎಸ್ ಯೋಜನೆ 1969 ಸೆಂಪ್ಟಬರ್‍ನಲ್ಲಿ ಉನ್ನತ ಶಿಕ್ಷಣದಲ್ಲಿ ಜಾರಿಗೆ ಬಂದಿದ್ದು, ಶಿಕ್ಷಣದೊಂದಿಗೆ ಸೇವೆ ಎಂಬ ಉದ್ದೇಶ ಹೊಂದಿದೆ. ಸ್ವಯಂ ಸೇವಕರು ಈ ಯೋಜನೆಯಲ್ಲಿ ಯುವ ಜನಾಂಗ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿ ಅರಿತು ಬದುಕಿನೊಡನೆ ಸಂಪರ್ಕ ಇಟ್ಟು ಕೊಳ್ಳಬೇಕೆಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಾಗಿತ್ತು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವರ್ಷದಲ್ಲಿ 10 ದಿನ ಶಿಬಿರದಲ್ಲಿ ಗ್ರಾಮೀಣ ಚಟುವಟಿಕೆಯಲ್ಲಿ ಭಾಗವಹಿಸಿಬೇಕೆಂದು ಕರೆ ನೀಡಿದರು.
ವೆಂಕಟೇಶ್ವರ ಗ್ಯಾಸ್ ಕಂಪನಿವತಿಯಿಂದ ವಿದ್ಯಾರ್ಥಿಗಳಿಗೆ ಗ್ಯಾಸ್ ಸಿಲೆಂಡರ್ ಒಲೆಗಳ ಉಪಯೋಗ ಹಾಗೂ ಅಗ್ನಿ ದುರಂತ ಸಂಭವಿಸಿದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಪ್ರಾತ್ಯಕ್ಷಿತೆ ಮಾಡಿ ತೋರಿಸಲಾಯಿತು.
ಉಪಪ್ರಾಚಾರ್ಯ ಎನ್.ಎಚ್.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಇಂಡಿಯನ್ ಗ್ಯಾಸ್ ಕಂಪನಿಯ ನಿವಾಸರಾವ್, ಉಪನ್ಯಾಸಕ ಶರಣಬಸವ ಎನ್‍ಎಸ್‍ಎಸ್ ಶಿಬಿರದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ದೈಹಿಕ ಶಿಕ್ಷಕ ಹುಸೇನಸಾಬ, ಬಂದಿಗಸಾಬ, ಮಲ್ಲಿಕಾರ್ಜುನ, ವಿಶ್ವರೇಖಾ, ವಿಜಯಲಕ್ಷ್ಮೀ, ಸುರೇಖಾ, ಪತ್ರಕರ್ತರಾದ ದುರಗಪ್ಪ ಹೊಸಮನಿ, ಬಸಲಿಂಗಪ್ಪ ಐದನಾಳ ಸೇರಿ ಇತರರು ಕಾರ್ಯಕ್ರಮದಲ್ಲಿ ಇದ್ದರು.

