ರಾಯಚೂರು

ಸದಾಶಿವ ವರದಿ ಜಾರಿಗೆ ಪಾದಯಾತ್ರೆ ಮೂಲಕ ಸರಕಾರದ ಕಣ್ತೆರೆಸಲು ಮಾದಿಗ ಚೈತನ್ಯಯಾತ್ರೆ : ಒಳಮೀಸಲಾತಿ ಹೋರಾಟಕ್ಕೆ ಸಜ್ಜಾದ ಶ್ರೀಗಳು

ಲಿಂಗಸುಗೂರು : ಬಹುಸಂಖ್ಯಾತರಿರುವ ಸಮುದಾಯಗಳಾದ ಮಾದಿಗ, ಚಲುವಾದಿ, ಡೋರ, ಡಕ್ಕ, ಸಮಗಾರ ಪಂಚ ಸಮುದಾಯಗಳ ಸ್ವಾಮೀಜಿಗಳ ಸಾರಥ್ಯದಲ್ಲಿ ರಾಜ್ಯದಲ್ಲಿ ಮಾದಿಗ ಚೈತನ್ಯ ಯಾತ್ರೆ ನಡೆಯುತ್ತಿದ್ದು, ನ್ಯಾ. ಎ.ಜೆ.ಸದಾಶಿವ ಅವರ ವರದಿ ಜಾರಿಗೊಳಿಸಲು ಮೀನಾಮೇಶ ಎಣಿಸುತ್ತಿರುವ ಸರಕಾರದ ಕಣ್ತೆರೆಸಲು ಸ್ವಾಮೀಜಿಗಳನ್ನು ಸಜ್ಜಾಗಿದ್ದಾರೆ. ರಾಜ್ಯವ್ಯಾಪಿ ಒಳಮೀಸಲಾತಿ ಹೋರಾಟಕ್ಕೆ ಅಣಿಗೊಳಿಸಿ, ಸಮುದಾಯದ ಬಾಂಧವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಇದರ ಅಂಗವಾಗಿ ಪಟ್ಟಣಕ್ಕೆ ಶನಿವಾರ ರಾತ್ರಿ ಹಿರಿಯೂರಿನ ಷಡಕ್ಷರಿ ಮುನಿದೇಶಿಕೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಶ್ರೀಗಳು ಆಗಮಿಸಿದ್ದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಮುದಾಯದಲ್ಲಿ ಜಾಗೃತಿ ಸಂಘಟನೆ ಮೂಡಿಸಲು ಪೂರ್ವಭಾವಿ ಸಭೆ ಗುಲಬರ್ಗಾ, ಬೀದರ್‍ಗಳಲ್ಲಿ ನಡೆಯಲಿದೆ. ಹಂತಹಂತವಾಗಿ ರಾಯಚೂರು, ಕೊಪ್ಪಳ ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಭೆಗಳನ್ನು ಮಾಡಲಾಗುವುದು. ಶಾಂತಿಯತವಾಗಿ ಪಾದಯಾತ್ರೆ ಕೈಗೊಳ್ಳುವ ಮೂಲಕ ಸರಕಾರದ ಮನವೊಲಿಸಲು ಮುಂದಾಗಬೇಕಿದೆ. ಬೇರೆ ಬೇರೆ ಸಮುದಾಯಗಳ ಸ್ವಾಮಿಗಳು ತಮ್ಮ ಹಕ್ಕನ್ನು ಪಡೆಯಲು ಹೋರಾಟ ಮಾಡುತ್ತಿದ್ದಾರೆ. ಅಂತೆಯೇ ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಬೇಕಿದೆ. ಜನಸಂಖ್ಯಾ ಆಧಾರಿತವಾಗಿ ಸರಕಾರ ಸವಲತ್ತುಗಳನ್ನು ಕೊಡುತ್ತಿದೆ. ಆದರೆ, ನಾವು ಈಗ ಕೇಳುತ್ತಿರುವುದು ಒಳ ಮೀಸಲಾತಿ. ಬಹುಸಂಖ್ಯಾತ ದಲಿತ ಸಮುದಾಯಕ್ಕೆ ನ್ಯಾಯಮೂರ್ತಿಗಳ ವರದಿಯಂತೆ ಮೀಸಲಾತಿ ನೀಡಬೇಕೆನ್ನುವ ಹೋರಾಟ ಹಮ್ಮಿಕೊಳ್ಳಲು ಸಮುದಾಯ ಮುಂದಾಗಬೇಕು. ಇದಕ್ಕೆ ರಾಜ್ಯಾದ್ಯಂತ ಸಭೆಗಳನ್ನು ಮಾಡಿ ಪಾದಯಾತ್ರೆಗೆ ಮುನ್ನುಡಿ ಬರೆಯವುದಾಗಿ ಹೇಳಿದರು.


ಐಮಂಗಲದ ಹರಳಯ್ಯಸ್ವಾಮಿ, ಹಂಪಿಯ ಮಾತಂಗ ಪರ್ವತದ ಪೂರ್ಣಾನಂದ ಸ್ವಾಮಿಗಳು, ಇಟಗಿ (ಕುಕನೂರು) ಶಿವಶರಣ ಗದಿಗೆಪ್ಪ ಅಜ್ಜನವರು, ಸಮುದಾಯದ ಮುಖಂಡರಾದ ಡಿ.ಬಿ.ಸೋಮನಮರಡಿ, ಗೋವಿಂದರೆಡ್ಡಿ, ಬಸವರಾಜ ಮ್ಯಾಗೇರಿ, ಮೋಹನ ಗೋಸ್ಲೆ, ಬಸವರಾಜ ಕೆಇಬಿ, ಹನುಮಂತಪ್ಪ ಮಾಸ್ತರ್, ರವಿ ಹೊಸಮನಿ ಇಲಕಲ್, ರಮೇಶ ಗೋಸ್ಲೆ, ಶಿವಾರೆಡ್ಡಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!