ನಂದವಾಡಗಿ ಹನಿ ನೀರಾವರಿ ಗುತ್ತಿಗೆ ರದ್ದು ಪಡಿಸಿ ಬಿಲ್ ತಡೆಗೆ ಆಗ್ರಹ
ಲಿಂಗಸುಗೂರು : ತಾಲೂಕಿನ ರೈತರ ಜೀವನಾಡಿಯಾಗಿರುವ ಮಹತ್ವದ ನಂದವಾಡಗಿ ಹನಿ ನೀರಾವರಿ ಯೋಜನೆಯ ಪ್ಯಾಕೇಜ್ ಸಂಖ್ಯೆ 1, 2 ಮತ್ತು 3ರ ಕಾಮಗಾರಿಗಳ ಗುತ್ತಿಗೆ ರದ್ದುಪಡಿಸಿ, ಬಿಲ್ ಪಾವತಿ ತಡೆ ಹಿಡಿಯಬೇಕೆಂದು ಸಿಪಿಐ(ಎಂಎಲ್) ರೆಡ್‍ಸ್ಟಾರ್ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು.
ಸ್ಥಳೀಯ ಸಹಾಯಕ ಆಯುಕ್ತರ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ನಂದವಾಡಗಿ ಯೋಜನೆಯ ಸಮಗ್ರ ಸ್ವರೂಪ ಅಂದರೆ ಹನಿ ನೀರಾವರಿಯನ್ನು ಹರಿ ನೀರಾವರಿ ಯೋಜನೆಯನ್ನಾಗಿ ಬದಲಾಯಿಸಬೇಕು.
ನಂದವಾಡಗಿ ಯೋಜನೆಗೆ 3.75 ಟಿ.ಎಂ.ಸಿ.ಯ ಬದಲು ಈ ಮೊದಲೇ ಇದ್ದ 6 ಟಿ.ಎಂ.ಸಿ. ನೀರನ್ನೇ ಕೊಡಬೇಕು. ಮಾನಪ್ಪ ವಜ್ಜಲ್‍ರ ಅನರ್ಹ ಮೇ|| ಎನ್.ಡಿ.ವಡ್ಡರ್ ಆಂಡ್ ಕಂಪನಿಗೆ ನೀಡಿದ ಗುತ್ತಿಗೆಯನ್ನು ರದ್ದುಪಡಿಸಿ ಶೇ.40 ಮುಂಗಡ ಹಣ ನೀಡಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಈ ಕಂಪನಿಗೆ ಪಾವತಿಯಾದ 353 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಬೇಕು. ನಂದವಾಡಗಿ ಯೋಜನೆಯ ಸಮಗ್ರ ಕಾಮಗಾರಿಗಳ ಭ್ರಷ್ಟಾಚಾರದ ಮೇಲೆ ತನಿಖೆ ನಡೆಸಲು ರೈತರನ್ನು ಒಳಗೊಂಡ ಉನ್ನತ ತನಿಖಾ ತಂಡವನ್ನು ರಚನೆ ಮಾಡಬೇಕೆಂದು ಆಗ್ರಹಿಸಿದರು.
ಯೋಜನಾ ವ್ಯಾಪ್ತಿಯ ರೈತರ ಪರವಾಗಿ ಸಿಪಿಐ(ಎಂಎಲ್) ನಿಯೋಗದ ಮುಖಂಡರಾದ ಆರ್.ಮಾನಸಯ್ಯ, ಎಂ.ಡಿ.ಅಮೀರ್‍ಅಲಿ, ಜಿ.ಅಮರೇಶ, ಶಾಂತಕುಮಾರ, ನಾಗಪ್ಪ ತಳವಾರ ಸೇರಿ ಇತರರು ಪ್ರತಿಭಟನೆಯಲ್ಲಿ ಇದ್ದರು.

