ಲಿಂಗಸುಗೂರಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ : ಎಲ್ಲೆಡೆ ಕೇಸರಿ ಕಾರುಬಾರು..!
ಲಿಂಗಸುಗೂರು : ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್‍ರ ಅಭಿನಂದನಾ ಸಮಾರಂಭ ಹಾಗೂ ಗ್ರಾಮ ಸ್ವರಾಜ್ಯ ಸಮಾವೇಶದ ಅಂಗವಾಗಿ ಪಟ್ಟಣ ಶನಿವಾರ ಕೇಸರಿಮಯವಾಗಿತ್ತು. ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು ಕ್ಷೇತ್ರದಲ್ಲಿ ಸಮರ್ಥವಾಗಿದೆ ಎಂದು ಪ್ರತಿರೋಧಿಗಳಿಗೆ ಶಕ್ತಿ ಪ್ರದರ್ಶನ ಮಾಡಿದಂತೆ ಭಾಸವಾಗುತ್ತಿತ್ತು.
ಬಿಜೆಪಿ ರಾಜ್ಯಾದ್ಯಕ್ಷ ನಳಿನ್‍ಕುಮಾರ ಕಟೀಲ್, ರಾಜ್ಯ ಕಾರ್ಯದರ್ಶಿ ರವಿಕುಮಾರ, ಸಂಸದರಾದ ರಾಜಾ ಅಮರೇಶ್ವರ ನಾಯಕ, ಸಂಗಣ್ಣ ಕರಡಿ, ವೈ.ದೇವೇಂದ್ರಪ್ಪ, ಶಾಸಕ ಡಾ.ಶಿವರಾಜ ಪಾಟೀಲ್ ಸೇರಿ ಹಲವು ಮುಖಂಡರನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಭರ್ಜರಿ ಬೈಕ್ ರ್ಯಾಲಿಯ ಮುಲಕ ಸ್ವಾಗತ ಕೋರಲಾಯಿತು.
ಸಾರಿಗೆ ಘಟಕದಿಂದ ಆರಂಭಗೊಂಡ ಮೆರವಣಿಗೆ ಗಡಿಯಾರ ಚೌಕ್, ಬಸ್ಟಾಂಡ್ ವೃತ್ತ, ಬಿಜೆಪಿ ಕಚೇರಿ ಮುಂಭಾಗದಿಂದ ವಿಜಯಮಹಾಂತೇಶ್ವರ ಶಾಖಾಮಠದಲ್ಲಿ ಆಯೋಜಿಸಿದ್ದ ಬೃಹತ್ ವೇದಿಕೆಗೆ ಕರೆ ತರಲಾಯಿತು.
ಮುಖಂಡರುಗಳಿಗೆ ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆಯರು ತಿಲಕವನ್ನಿಟ್ಟು ಸ್ವಾಗತ ಕೋರಿದರು. ಗ್ರಾಮೀಣ, ಪಟ್ಟಣ ಸೇರಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಸಮಾರಂಭಕ್ಕೆ ಸಾಕ್ಷಿಯಾದರು. ಸಮಾವೇಶದಲ್ಲಿ ಹಟ್ಟಿ ಚಿನ್ನದ ಗಣಿಯ ಅದ್ಯಕ್ಷರಿಗೆ ಹಾಗೂ ಪಕ್ಷದ ಮುಖಂಡರುಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

