ರಾಯಚೂರು

ಲಿಂಗಸುಗೂರು ಪುರಸಭೆ ಮಾಜಿ ಅದ್ಯಕ್ಷ ಖಾದರಬಾಷಾ ಒತ್ತಾಯ ‘ಕಸ ವಿಲೇವಾರಿ ವಾಹನಗಳ ಖರೀದಿಸಿ , ಅನಧಿಕೃತ ಬಡಾವಣೆಗಳನ್ನು ರದ್ದು ಮಾಡಿ’

ಲಿಂಗಸುಗೂರು : ಪಟ್ಟಣದಲ್ಲಿ ಕಸವಿಲೇವಾರಿ ವಾಹನಗಳ ಕೊರತೆಯಿಂದ ವಾರ್ಡ್‍ಗಳಲ್ಲಿ ಸ್ವಚ್ಛತೆ ಮಾಯವಾಗಿದ್ದು, ಸಾರ್ವಜನಿಕರು ರೋಗಗ್ರಸ್ಥ ವಾತಾವರಣದಲ್ಲಿ ಇದ್ದಾರೆ. ಕೂಡಲೇ ಮುಖ್ಯಾಧಿಕಾರಿಗಳು ಕಸವಿಲೇವಾರಿ
ವಾಹನಗಳನ್ನು ಖರೀದಿಸಬೇಕು. ಅನಧಿಕೃತವಾಗಿ ಬಡಾವಣೆಗಳನ್ನು ನಿರ್ಮಿಸಿ ಮಾರಾಟ ಮಾಡಿದ ನಿವೇಶನಗಳನ್ನು ರದ್ದುಪಡಿಸಿ ಬಡಾವಣೆಗಳ
ಅಭಿವೃದ್ಧಿಗೆ ಮುಂದಾಗಬೇಕೆಂದು ಪುರಸಭೆ ಮಾಜಿ ಅದ್ಯಕ್ಷ
ಖಾದರಬಾಷಾ ಒತ್ತಾಯಿಸಿದರು.

ಮುಖ್ಯಾಧಿಕಾರಿ ವಿಜಯಲಕ್ಷ್ಮಿಯವರಿಗೆ ಶನಿವಾರ ಮನವಿ ಸಲ್ಲಿಸಿದ ಅವರು, 2018ರಲ್ಲಿ ನಾನು ಪುರಸಭೆ ಅದ್ಯಕ್ಷನಾಗಿದ್ದ ವೇಳೆ, ಪಟ್ಟಣದ ಸ್ವಚ್ಛತೆ ಕಾಪಾಡಲು ಕಸ ವಿಲೇವಾರಿಗಾಗಿ ವಾಹನಗಳನ್ನು ಖರೀದಿಸಬೇಕೆಂದು ಅಂದಿನ ಆಡಳಿತ ಮಂಡಳಿಯ ಸಭೆ ನಡೆಸಿ, ಸರ್ವಾನುಮತದ ಒಪ್ಪಗೆ ಪಡೆದಿದ್ದೆ. ಮುಂದುವರೆದು
ಜಿಲ್ಲಾಧಿಕಾರಿಗಳಿಗೂ ವಿಷಯ ತಿಳಿಸಿ, ಅವರಿಂದ ಆದೇಶ ಪಡೆದು ವಾಹನಗಳ ಖರೀದಿಗೆ ಠರಾವು ಪಾಸ್ ಮಾಡಲಾಗಿತ್ತು. ಅದರಲ್ಲಿ 4 ಟಾಟಾ ಏಸ್ ವಾಹನಗಳು
ಪಟ್ಟಣದ ಬೀದಿಗಳಲ್ಲಿ ಕಸ ವಿಲೇವಾರಿ ಮಾಡಲು ಮತ್ತು 1 ಟಾಟಾ ಎಸ್ ವಾಹನ ಪಟ್ಟಣದ ಬೀದಿದೀಪಗಳ ದುರಸ್ತಿಗೆ ಸಾಮಗ್ರಿ ಹೊತ್ತೊಯ್ಯಲು ಬಳಸಬೇಕೆಂದು ತೀರ್ಮಾನಿಸಲಾಗಿತ್ತು.

ಈ ವಿಷಯವನ್ನು ಹಿಂದಿನ ಮುಖ್ಯಾಧಿಕಾರಿಗಳು ಗಂಭೀರವಾಗಿ ಪರಿಗಣಿಸದೇ ಕಾಲಹರಣ ಮಾಡಿ ವರ್ಗಾವಣೆಯಾಗಿ ತೆರಳಿದರು. ಇತ್ತೀಚೆಗೆ
ಹಾಲಿ ಸದಸ್ಯರುಗಳು ಕಸ ಶೇಖರಣೆಗಾಗಿ 2.14 ಕೋಟಿ
ರೂಪಾಯಿಗಳನ್ನು ವ್ಯಯಿಸಿದ್ದಾರೆನ್ನುವ ಮಾಹಿತಿ ನೀಡಿದ್ದಾರೆ. ತುರ್ತಾಗಿ ತಾವುಗಳು ಪಟ್ಟಣದ ಸ್ವಚ್ಛತೆಗಾಗಿ ಕಸವಿಲೇವಾರಿ ಮಾಡಲು ಹೊಸ ವಾಹನಗಳನ್ನು ಖರೀದಿ ಮಾಡಬೇಕು. ಹಾಲಿ ದುರಸ್ತಿಯಲ್ಲಿರುವ ವಾಹನಗಳನ್ನು ತುರ್ತಾಗಿ ದುರಸ್ತಿ ಮಾಡಿಸಿ, ಸಾರ್ವಜನಿಕ ಸೇವೆಗೆ
ಬಿಡಬೇಕೆಂದು ಒತ್ತಾಯಿಸಿದರು.

ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಬಡಾವಣೆಗಳು
ತಲೆಎತ್ತಿವೆ. ರಸ್ತೆ, ಚರಂಡಿ, ನೀರು, ವಿದ್ಯುತ್ ಸೇರಿ ಮೂಲ ಸವಲತ್ತುಗಳನ್ನು ಕಲ್ಪಿಸದೇ ನಿವೇಶನಗಳನ್ನು ಮಾರಾಟ
ಮಾಡಲಾಗುತ್ತಿದೆ. ಪರಿಣಾಮ ಸಾರ್ವಜನಿಕರು ತೊಂದರೆ
ಅನುಭವಿಸುತ್ತಿದ್ದಾರೆ. ಕೂಡಲೇ ನಿಯಮಾನುಸಾರ ಕೈಗೊಂಡು,ಬಡಾವಣೆಗಳ ಅಭಿವೃದ್ಧಿಯಾದ ಬಳಿಕವೇ ನಿವೇಶನಗಳನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಮಾಜಿ ಅದ್ಯಕ್ಷರ ಮನವಿಗೆ ಸ್ಪಂಧಿಸಿದ ಮುಖ್ಯಾಧಿಕಾರಿ ವಿಜಯಲಕ್ಷ್ಮಿ,ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಮುಖಂಡ ಅಲ್ಲಾವುದ್ದೀನ್ ಪಟೇಲ್ ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!