ರಾಯಚೂರು

ಪತ್ರಕರ್ತರ ಮೇಲೆ ಸುಳ್ಳು ದೂರು : ಕ್ರಮಕ್ಕೆ ಒತ್ತಾಯ

ಲಿಂಗಸುಗೂರು : ಪಟ್ಟಣದ ಕೆಲ ಪತ್ರಕರ್ತರ ಮೇಲೆ ಸುಳ್ಳು ದೂರು ನೀಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ಸಂಘದ ಅದ್ಯಕ್ಷ ಶಿವರಾಜ ಕೆಂಭಾವಿಯವರ ಅದ್ಯಕ್ಷತೆಯಲ್ಲಿ
ಸ್ಥಳೀಯ ಪತ್ರಿಕಾ ಭವನದಲ್ಲಿ ಸಭೆ ಸೇರಿದ್ದ ತಾಲೂಕಿನ
ಪತ್ರಕರ್ತರು, ಸಿಪಿಐ ಮಹಾಂತೇಶ ಸಜ್ಜನ್‍ರ ಮೂಲಕ ಡಿವೈಎಸ್‍ಪಿಯವರಿಗೆ ಮನವಿ ಸಲ್ಲಿಸಿದರು.

2020ರ ಡಿಸೆಂಬರ್ ಮಾಹೆಯಲ್ಲಿ ಲಿಂಗಸಗೂರು ಪಟ್ಟಣದಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಇದರಿಂದ ಸಾರ್ವಜನಿಕರ ಮೇಲೆ ದೌರ್ಜನ್ಯ
ನಡೆಸುತ್ತಿರುವುದಾಗಿ ಹಾಗೂ ಪತ್ರಕರ್ತರಾದವರು ದೌರ್ಜನ್ಯ,ಹಫ್ತಾವಸೂಲಿ ಸೇರಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆಂದು ತಲೆಬುಡವಿಲ್ಲದ ವಿಷಯಗಳ ಉಲ್ಲೇಖ ಮಾಡಿ ಅಪ್ಸರ್, ಮಲ್ಲಪ್ಪ, ರಂಗಪ್ಪ, ಸಾಮೀದಲಿ ಎನ್ನುವವರು, ಪತ್ರಕರ್ತರು ಹಾಗೂ ಪತ್ರಿಕೆ ಹೆಸರುಗಳನ್ನು ಬಳಸಿಕೊಂಡು ದೂರು ನೀಡಿದ್ದಾರೆ. ಈ
ದೂರು ಪರಿಗಣಿಸಿ ತಾವುಗಳು ಕೆಲವು ಪತ್ರಕರ್ತರನ್ನು ಕರೆದು
ವಿಚಾರಿಸಿದ್ದೀರಿ.

ಸಮಾಜದ ಸ್ವಾಸ್ಥ್ಯ ಮತ್ತು ಧ್ವನಿ ಇಲ್ಲದವರಿಗೆ ಧ್ವನಿಯಾಗಿ,
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಮಾಜಮುಖಿ ಕಾರ್ಯ ಮಾಡುತ್ತಿರುವ ನಮ್ಮ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ನಮ್ಮ ತೇಜೋವಧೆ ಮಾಡುವ ಜೊತೆಗೆ ಪತ್ರಿಕೆಗಳಿಗೆ ಕಳಂಕ ಮೆತ್ತುವ ಹುನ್ನಾರಕ್ಕೆ ದೂರುದಾರರು ಕೈ ಹಾಕಿದ್ದಾರೆ. ದೇಶದಲ್ಲಿ ಪತ್ರಿಕಾರಂಗ ನಾಲ್ಕನೇ ಅಂಗವೆಂದು ಗುರುತಿಸಿಕೊಂಡಿದ್ದು, ಇಂಥಹ
ಪವಿತ್ರ ರಂಗಕ್ಕೆ ಕೆಲವರು ಅನಗತ್ಯವಾಗಿ ಕಪ್ಪುಚುಕ್ಕೆ ಉಂಟು
ಮಾಡುವ ಜೊತೆಗೆ ಪತ್ರಕರ್ತರಿಗೂ ಘಾಸಿ ಉಂಟು ಮಾಡಿದ್ದಾರೆ. ಇದರಿಂದ ಸಾಮಾಜಿಕ ಜವಾಬ್ದಾರಿಯೊಂದಿಗೆ ಕೆಲಸ ಮಾಡುವ ನಮಗೆ ತೀವ್ರ ನೋವುಂಟಾಗಿದ್ದು, ಇದನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಬಲವಾಗಿ ಖಂಡಿಸುತ್ತದೆ.

ಸದರಿ ದೂರಿನ ಪ್ರತಿಗಳನ್ನು ಘನತೆವೆತ್ತ ರಾಜ್ಯಪಾಲರು,
ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರು, ಕೆಳಹಂತದ
ನ್ಯಾಯಾಲಯಗಳ ನ್ಯಾಯಾಧೀಶರು,ಮುಖ್ಯಮಂತ್ರಿಯಾದಿಯಾಗಿ
ಸಚಿವರು, ಪೋಲಿಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ, ವಾರ್ತಾ ಮತ್ತು ಪ್ರಸಾರ ಇಲಾಖೆಯ ಮೇಲಧಿಕಾರಿಗಳಿಗೆ ಸಲ್ಲಿಸಲಾಗಿದೆ. ಪರಿಣಾಮ, ನಾವು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಿಕೆಗಳ ಸಂಪಾದಕರು/ಪ್ರಧಾನ
ವರದಿಗಾರರಿಗೆ ವಾರ್ತಾ ಇಲಾಖೆಯಿಂದ ಸ್ಪಷ್ಟೀಕರಣ ಬಯಸಿ ನೋಟಿಸ್ ನೀಡಿದ್ದಾರೆ ಅದಕ್ಕೆ ಪ್ರತಿಯಾಗಿ ನಮ್ಮ ಸಂಪಾದಕರುಗಳು ದೂರಿನಲ್ಲಿ ಉಲ್ಲೇಖಿಸಿದ ಪತ್ರಕರ್ತರು ನಮ್ಮ ಪತ್ರಿಕೆಯ ವರದಿಗಾರರೆಂದು ಸ್ಪಷ್ಟೀಕರಣ ನೀಡಿದ್ದಾರೆ.

ಪತ್ರಕರ್ತರ ವಿರುದ್ಧ ಅನಗತ್ಯ, ಸತ್ಯಕ್ಕೆ ದೂರವಾದ
ದೂರುಗಳನ್ನು ನೀಡಿ, ಸರಕಾರಿ ಅಧಿಕಾರಿಗಳ ಸಮಯವನ್ನು ವ್ಯರ್ಥ ಮಾಡುವ ಜೊತೆಗೆ ಪತ್ರಕರ್ತರ ನೆಮ್ಮದಿಗೂ ಭಂಗ
ತಂದಿದ್ದಾರೆಂದು ಹೇಳುತ್ತಾ, ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.


ಸಂಘದ ಜಿಲ್ಲಾ ಉಪಾದ್ಯಕ್ಷ ರಾಘವೇಂದ್ರ ಗುಮಾಸ್ತೆ, ತಾಲೂಕು‌ ಪ್ರದಾನ ಕಾರ್ಯದರ್ಶಿ ಗುರುರಾಜ ಗೌಡೂರು, ಹಿರಿಯ ಪತ್ರಕರ್ತರಾದ ಬಿ.ಎ.ನಂದಿಕೋಲಮಠ, ಘನಮಠದಯ್ಯ, ಖಾಸಿಂಅಲಿ ಹಟ್ಟಿ, ಶರಣಯ್ಯ
ಒಡೆಯರ್, ಖಾಜಾಹುಸೇನ್, ನಾಗರಾಜ ಗೊರೆಬಾಳ, ಡಾ.ಶರಣಪ್ಪ ಆನೆಹೊಸೂರು, ಅಮರೇಶಸ್ವಾಮಿ ಬಲ್ಲಟಗಿ, ಸಿದ್ದನಗೌಡ ಹಟ್ಟಿ, ಸೋಮಣ್ಣ ಹಟ್ಟಿ, ದುರುಗಪ್ಪ ಹೊಸಮನಿ, ಅಮರೇಶ ಕಲ್ಲೂರು, ಅಮರಯ್ಯ
ಘಂಟಿ, ರಾಘವೇಂದ್ರ ಭಜಂತ್ರಿ, ರವಿಕುಮಾರ, ನಾಗರಾಜ ಮಡಿವಾಳರ್,ಅಮ್ಜದ್ ಮುದಗಲ್, ಹನುಮಂತ ಕನ್ನಾಳ, ಪಂಪಾಪತಿ, ಬಸಲಿಂಗಪ್ಪ,
ಸುನಿಲಕುಮಾರ ಹಟ್ಟಿ, ಬಲಭೀಮರಾವ್, ಡಿ.ಜಿ.ಶಿವು, ಶರಣಬಸವ, ಅಮರೇಶ
ಹಟ್ಟಿ, ದೇವಣ್ಣ ಕೋಡಿಹಾಳ ಸೇರಿ ತಾಲೂಕಿನ ಲಿಂಗಸುಗೂರು, ಹಟ್ಟಿ,
ಮುದಗಲ್ ವಿಭಾಗದ ಪತ್ರಕರ್ತರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!