ನವಜಾತ ಶಿಶು ಬಿಟ್ಟು ಹೋದ ಪಾಪಿ ತಾಯಿ : ರಕ್ಷಣೆ
ಲಿಂಗಸುಗೂರು : ಜನನಿ, ಮಾತೆ, ತಾಯಿ, ಅಮ್ಮ ಎನ್ನುವ ಪದಕ್ಕೆ ಸಮಾನಾರ್ಥಕವಾಗಿ ಮತ್ತೊಂದು ಪದವೇ ಇಲ್ಲ. ತಾಯಿ ಯಾವತ್ತಿಗೂ ಕೆಟ್ಟವಳಾಗಲು ಸಾಧ್ಯ ವೇ ಇಲ್ಲ. ಎನ್ನುವ ಮಾತುಗಳಿಗೆ ತದ್ವಿರುದ್ಧವಾದ ಘಟನೆಯೊಂದು ಲಿಂಗಸುಗೂರು ತಾಲೂಕಿನ ಹಲಕಾವಟಗಿ ಗ್ರಾಮದಲ್ಲಿ ಜರುಗಿರುವುದು ದುರಂತವೇ ಸರಿ.
ಲಿಂಗಸುಗೂರು ತಾಲೂಕಿನ ಹಲಕಾವಟಗಿ ಗ್ರಾಮದ ಹೊರವಲಯದಲ್ಲಿ ನವಜಾತ ಗಂಡು ಶಿಶುವೊಂದನ್ನು ಬಿಟ್ಟು ನವ ಮಾಸ ಹೊತ್ತು ಹೆತ್ತ ಮಹಾತಾಯಿ ಪರಾರಿಯಾಗಿರುವ ಮನಕಲಕುವ ಘಟನೆ ಬುಧವಾರ ಸಂಜೆ ವರದಿಯಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ತೆರಳಿರುವ ಸಿಡಿಪಿಓ ಶರಣಮ್ಮ ಅವರ ನೇತೃತ್ವದ ತಂಡ ಮಗುವನ್ನು ರಕ್ಷಣೆ ಮಾಡಿದೆ. ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಸಿಡಿಪಿಓ, ನವಜಾತ ಶಿಶುವನ್ನು ರಕ್ಷಣೆ ಮಾಡಲಾಗಿದೆ ಶಿಶುವಿನ ಆರೋಗ್ಯ ತಪಾಸಣೆಯನ್ನು ಲಿಂಗಸುಗೂರು ಸರಕಾರಿ ಆಸ್ಪತ್ರೆಯಲ್ಲಿ ಮಾಡಿಸಿ, ಜಿಲ್ಲಾ ಕೇಂದ್ರದಲ್ಲಿರುವ ಬಾಲ ವಿಹಾರ ಕೇಂದ್ರಕ್ಕೆ ರವಾನಿಸಲಾಗುವುದು. ಈ ದುಷ್ಕೃತ್ಯ ಎಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದರು.
ಒಂಬತ್ತು ತಿಂಗಳು ಹೊತ್ತು, ಹೆತ್ತ ಮಗುವನ್ನು ಮೃಗೀಯ ರೀತಿಯಲ್ಲಿ ಬಿಟ್ಟು ಹೋಗಿರುವ ಮಹಾತಾಯಿಯ ಕುಕೃತ್ಯಕ್ಕೆ ಗ್ರಾಮಸ್ಥರಲ್ಲಿ ಆಕ್ರೋಶ ವ್ಯಕ್ತವಾಗಿದೆ.

