ಶಿಕ್ಷಕ ಚಂದ್ರುಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ : ಅಭಿನಂದನೆ
ಲಿಂಗಸುಗೂರು : ತಾಲೂಕಿನ ಬೆಂಡೋಣಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಚಂದ್ರು ವೈ.ಎ. ಅವರಿಗೆ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕ ವಲಯ ಅವರನ್ನು ಅಭಿನಂದಿಸಿದ್ದಾರೆ.
ಕ್ರಿಯಾತ್ಮಕವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳುವ ಜೊತೆಗೆ ಮಕ್ಕಳ ಬುದ್ದಿಮಟ್ಟಕ್ಕಿಳಿದು ಗುಣಾತ್ಮಕವಾಗಿ ಪಾಠ ಬೋಧನೆ ಮಾಡುತ್ತಿದ್ದ ಶಿಕ್ಷಕ ಚಂದ್ರು ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಬಂದ ಈ ಪ್ರಶಸ್ತಿಯನ್ನು ಇಂದು (ಸೆ.5) ಬೆಂಗಳೂರಲ್ಲಿ ನೀಡಲಾಗುತ್ತಿದೆ. ಗ್ರಾಮೀಣ ಭಾಗದಿಂದ ರಾಜ್ಯ ಮಟ್ಟದಲ್ಲಿ ಕೀರ್ತಿ ಪಡೆದ ಶಿಕ್ಷಕ ಚಂದ್ರ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ್ ಸೇರಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕವರ್ಗ ಅಭಿನಂದನೆ ಸಲ್ಲಿಸಿದ್ದಾರೆ. ಶಾಲೆ ಹಾಗೂ ಗ್ರಾಮದಲ್ಲಿ ಹರ್ಷದ ವಾತಾವರಣ ಮನೆ ಮಾಡಿದೆ.

