ರಾಯಚೂರು

ತರಕಾರಿ ಮಾರುವವರು ಬಹಳ.. ಕೊಳ್ಳುವವರು ವಿರಳ..!

ವರದಿ: ಖಾಜಾಹುಸೇನ್
ಲಿಂಗಸುಗೂರು : ಲಾಕ್‍ಡೌನ್ ಮುಂದುವರೆಯುತ್ತಿದ್ದಂತೆಯೇ ದಿನಬೆಳಗಾದರೆ ಜನಜಂಗುಳಿಯಿಂದ ತುಂಬಿರುತ್ತಿದ್ದ ತರಕಾರಿ ಮಾರುಕಟ್ಟೆಯೀಗ ವ್ಯಾಪಾರಿಗಳಿಂದ ತುಂಬಿರುತ್ತದೆಯೇ ವಿನಹ ಕೊಳ್ಳುವವರು ಮಾತ್ರ ಕಡಿಮೆ ಸಂಖ್ಯೆಯಲ್ಲಿ ಕಂಡು ಬರುತ್ತಿರುವುದು ಇತ್ತೀಚಿಗೆ ಸಾಮಾನ್ಯವಾಗಿದೆ.

ನಾಲ್ಕು ದಿನಗಳಿಂದ ಲಾಕ್‍ಡೌನ್ ಆರಂಭವಾಗಿದ್ದು, ಮೊದಲ ದಿನ ಪೋಲಿಸರ ಲಾಠಿ ಏಟಿಗೆ ಬಹುತೇಕರು ಮನೆ ಸೇರಿಕೊಂಡಿದ್ದಾರೆ. ಅನಗತ್ಯವಾಗಿ ಓಡಾಡುತ್ತಿರುವವರ ಮೇಲೆ ಪೋಲಿಸರು ಕ್ರಮ ಕೈಗೊಂಡಿದ್ದಾರಾದರೂ, ಹಲವರು ಊಹಾಪೋಹಗಳಿಗೆ ಕಿವಿಗೊಟ್ಟು ತರಕಾರಿ ಕೊಳ್ಳಲಿಕ್ಕೂ ಹೊರಗೆ ಬಾರದೇ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆನ್ನುವ ಮಾತುಗಳು ಕೇಳಿ ಬರುತ್ತಿವೆ.

ಸರಕಾರಿ ಜ್ಯೂನಿಯರ್ ಕಾಲೇಜು, ಹಳೆಯ ತರಕಾರಿ ಮಾರುಕಟ್ಟೆ, ಗುಲಬರ್ಗಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಸ್ಕೂಲ್, ಬೆಂಗಳೂರು ಬೈಪಾಸ್ ರಸ್ತೆಯಲ್ಲಿರುವ ಉಮಾಮಹೇಶ್ವರಿ ಕಾಲೇಜು ಬಳಿ ತಾತ್ಕಾಲಿಕವಾಗಿ ತರಕಾರಿ ಮಾರುಕಟ್ಟೆಗೆ ಆಸ್ಪದ ನೀಡಲಾಗಿದೆ. ಆಯಾ ಪ್ರದೇಶದ ನಿವಾಸಿಗಳು ನಿಗದಿತ ಸ್ಥಳಗಳಲ್ಲಿಯೇ ಅಗತ್ಯದ ತರಕಾರಿಗಳನ್ನು ಕೊಳ್ಳಬೇಕೆಂದು ಆದೇಶ ನೀಡಲಾಗಿದೆ. ಸಗಟು ವ್ಯಾಪಾರ ಮಾತ್ರ ಎಪಿಎಂಸಿ ಪ್ರಾಂಗಣದಲ್ಲೇ ನಡೆಯುತ್ತದೆ. ನಸುಕಿನಲ್ಲಿ ವ್ಯಾಪಾರಿಗಳು ಎಪಿಎಂಸಿಯಿಂದ ಖರೀದಿಸಿದ ತರಕಾರಿಯನ್ನು ನಿಗದಿತ ಸ್ಥಳಗಳಲ್ಲಿ ತಂದು ಮಾರಾಟ ಮಾಡುತ್ತಾರೆ.

ಹಬ್ಬದ ವಾತಾವರಣವಿದ್ದಾಗ್ಯೂ ತಂದ ತರಕಾರಿ ಮೊದಲಿನಂತೆ ವ್ಯಾಪಾರ ಆಗುತ್ತಿಲ್ಲ. ಜನರು ಮನೆಯಿಂದ ಆಚೆ ಬರುವುದು ಕಡಿಮೆಯಾದ ಪರಿಣಾಮ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ ಎನ್ನುವುದು ವ್ಯಾಪಾರಿಗಳ ಮಾತಾಗಿದೆ. ಸೊಪ್ಪು, ತರಕಾರಿ ಬೆಳೆಗಳು ಒಂದೆರಡು ದಿನಗಳಲ್ಲಿ ಕೊಳೆಯುವ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಳ್ಳಲಿಕ್ಕೂ ಆಗದೇ, ಇತ್ತ ವ್ಯಾಪಾರವೂ ಇಲ್ಲದೇ ಬಹುತೇಕ ವ್ಯಾಪಾರಿಗಳು ಗ್ರಾಹಕರಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಾ ಕುಳಿತ ದೃಶ್ಯಗಳು ಬುಧವಾರ ಬೆಳಗ್ಗೆ ಮಾರುಕಟ್ಟೆಯಲ್ಲಿ ಕಂಡು ಬಂತು.

Leave a Reply

Your email address will not be published. Required fields are marked *

error: Content is protected !!