ಪರವಾನಿಗೆ ಇಲ್ಲದೆ ರಸ್ತೆ ಪಕ್ಕ ಅಗೆತ : ಮುಖ್ಯಾಧಿಕಾರಿ ಭೇಟಿ, ಕ್ರಮದ ಎಚ್ಚರಿಕೆ
ಲಿಂಗಸುಗೂರು : ಸ್ಥಳೀಯ ಆಡಳೀತದ ಗಮನಕ್ಕಿಲ್ಲದೇ ಖಾಸಗಿ ಟೆಲಿಕಾಂ ಕಂಪನಿಯ ಗುತ್ತಿಗೆದಾರರು ರಸ್ತೆ ಪಕ್ಕ ಗುಂಡಿಗಳನ್ನು ಅಗೆದ ಪರಿಣಾಮ ಸಾರ್ವಜನಿಕರಿಗೆ ತೀವ್ರ ತೊಂದತೆಯುಂಟಾಗುತ್ತಿದೆ ಎನ್ನುವ ದೂರನ್ನು ಆಲಿಸಿ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಾಧಿಕಾರಿ ವಿಜಯಲಕ್ಷ್ಮಿ, ಪರವಾನಿಗೆ ಇಲ್ಲದೇ ರಸ್ತೆಯನ್ನು ಅಗೆಯುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಪುರಸಭೆ ವ್ಯಾಪ್ತಿಯ 7 ಮತ್ತು 18 ವಾರ್ಡ್‍ಗಳಿಗೆ ಸಂಪರ್ಕ ಕಲ್ಪಿಸುವ ಹಾಗೂ ರಾಯಚೂರು ಬೈಪಾಸ್ ರಸ್ತೆಯಲ್ಲಿ ಖಾಸಗಿ ಟೆಲಿಕಾಂ ಕಂಪನಿಯವರು ಕೇಬಲ್ ಅಳವಡಿಕೆಗೆ ರಸ್ತೆ ಪಕ್ಕ ಗುಂಡಿಗಳನ್ನು ಅಗೆದಿದ್ದಾರೆ. ಅಲ್ಲಲ್ಲಿ ರಸ್ತೆಗೂ ಹಾನಿಯಾಗಿದೆ. ಅಗೆದ ಮಣ್ಣನ್ನು ರಸ್ತೆ ಪಕ್ಕವೇ ಹಾಕಲಾಗಿದೆ. ಬುಧವಾರ ರಾತ್ರಿ ಸುರಿದ ಮಳೆಯಿಂದ ಮಣ್ಣೆಲ್ಲಾ ರಸ್ತೆಗೆ ಬಂದು ಜನರ, ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ಈ ಬಗ್ಗೆ ಬಂದ ದೂರಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ, ಕಾಮಗಾರಿಯ ವಿವರ ಪಡೆಯಲು ಸಂಬಂಧಿಸಿದ ಗುತ್ತಿಗೆದಾರರಿಗೆ ದೂರವಾಣಿ ಮೂಲಕ ಕರೆ ಮಾಡಿದರು. ಆದರೆ, ಸಕಾರಣ ನೀಡದೇ ಗುತ್ತಿಗೆದಾರ ಸರಿಯಾಗಿ ಸ್ಪಂಧಿಸಲಿಲ್ಲ ಎನ್ನಲಾಗಿದೆ. ಪರಿಣಾಮ ಮುಖ್ಯಾಧಿಕಾರಿ ಕೂಡಲೇ ಕಾಮಗಾರಿ ನಿಲ್ಲಿಸಲು ಸೂಚನೆ ನೀಡಿದ್ದು, ಅನುಮತಿ ಪಡೆಯದೇ ರಸ್ತೆ ಅಗೆದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸರ್ ಎಂ.ವಿಶ್ವೇಶ್ವರಯ್ಯ ಪದವಿ ಮಹಾವಿದ್ಯಾಲಯ, ವಿಸಿಬಿ ಮಹಾವಿದ್ಯಾಲಯಗಳಿಗೆ ತೆರಳಲು ವಿದ್ಯಾರ್ಥಿಗಳು ಈ ರಸ್ತೆಯಲ್ಲೇ ಸಂಚರಿಸಬೇಕು. ಅಲ್ಲದೇ, ನಿತ್ಯ ಬೈಕ್, ಕಾರು, ಜೀಪ್, ಬಸ್ ಸೇರಿ ನೂರಾರು ವಾಹನಗಳು ಓಡಾಡುತ್ತವೆ. ರಸ್ತೆಗುಂಟ ಅಗೆದ ಮಣ್ಣು ಹಾಕಿದ್ದರಿಂದ ದಾರಿಹೋಕರಿಗೆ ತೊಂದರೆಯಾಗುತ್ತಿದೆ.
ರಾಜಾರೋಷವಾಗಿ ಸಾರ್ವಜನಿಕರಿಗೆ ತೊಂದರೆಯಾಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಕ್ಕೆ ಬೇಟಿ ನೀಡಿದ್ದ ಮುಖ್ಯಾಧಿಕಾರಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆನ್ನುವ ಮಾತುಗಳು ಕೇಳಿಬರುತ್ತಿವೆ. ಮುಖ್ಯಾಧಿಕಾರಿಗಳ ಜೊತೆಗೆ ಕಚೇರಿ ಸಿಬ್ಬಂಧಿಗಳು ಇದ್ದರು.

