ರಾಯಚೂರು

ಚರಂಡಿ ನೀರು ಕೆರೆಗೆ : ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹೊಣೆಯಾರು..?

ಲಿಂಗಸುಗೂರು : ಪುರಸಭೆ ವ್ಯಾಪ್ತಿಯಲ್ಲಿರುವ ಐತಿಹಾಸಿಕ
ಕೆರೆಗೆ ಚರಂಡಿ ನೀರನ್ನು ಹರಿಸಲಾಗುತ್ತಿದ್ದು, ಕ್ರಮ
ಕೈಗೊಳ್ಳಬೇಕಿರುವ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ
ಹೊಣೆಯಾರು..? ಎನ್ನುವ ಪ್ರಶ್ನೆಗಳೀಗ ಸಾರ್ವಜನಿಕರಲ್ಲಿ ಕೇಳಿ ಬರುತ್ತಿವೆ.

ಸಾರ್ವಜನಿಕರ ಅನುಕೂಲಕ್ಕಾಗಿ ಲಕ್ಷಗಟ್ಟಲೇ ಅನುದಾನದಲ್ಲಿ ಕೆರೆಯ ಒಂದು ಭಾಗ ಮಣ್ಣು ಹಾಕಿ ಉದ್ಯಾನವನ, ವಾಕಿಂಗ್ ಟ್ರಾಕ್ ಮಾಡಲು ಶಾಸಕರು ಮುಂದಾಗಿದ್ದರು. ಕಾಮಗಾರಿ ಗುತ್ತಿಗೆ ಪಡೆದವರು ಕೆಲಸವನ್ನು ಮಂದಗತಿಯಲ್ಲಿ ಮಾಡುತ್ತಲೇ ಇದ್ದಾರೆ. ರಸ್ತೆ ಅಗಲೀಕರಣ ಮಾಡುವ ಕೆಲಸವೂ ಮತ್ತೊಂದು
ಕಡೆ ಚಾಲ್ತಿಯಲ್ಲಿದೆ. ಅಗಲೀಕರಣದ ಮಧ್ಯ ಬರುವ
ಚರಂಡಿಯನ್ನು ಕಟ್ ಮಾಡಲಾಗಿದ್ದು, ಚರಂಡಿಯಲ್ಲಿ ಹರಿದು
ಹೋಗುವ ನೀರು ಪಕ್ಕದ ತೆಗ್ಗಿನಲ್ಲಿಯೇ ನಿಂತಿದೆ. ತೆಗ್ಗಿನಲ್ಲಿ ನಿಂತ ನೀರನ್ನು ಮೋಟರ್ ಬಳಸಿ ಕೆರೆಗೆ ಹರಿಸಲಾಗುತ್ತಿದೆ.

ಶುದ್ಧವಾಗಿರುವ ಕೆರೆಯ ನೀರಿಗೆ ಮಲಿನ ನೀರನ್ನು ಹರಿಸುವ
ಮೂಲಕ ಗುತ್ತೇದಾರರು ಪ್ರಮಾದವನ್ನು ಎಸಗುತ್ತಿರುವುದು ಖಂಡನೀಯವೆಂದು ಭೀಮ್ ಆರ್ಮಿ ಸಂಘಟನೆ
ಕಾರ್ಯಕರ್ತರು ಸೋಮವಾರ ಸ್ಥಳಕ್ಕೆ ತೆರಳಿ ಆಕ್ರೋಶ
ವ್ಯಕ್ತಪಡಿಸಿದ್ದಾರೆ. ಕಲುಶಿತ ನೀರು ಕೆರೆಯಲ್ಲಿ ಮಿಶ್ರಣಗೊಂಡರೆ ನೀರೆಲ್ಲಾ ವಿಶಕಾರಿಯಾಗುವ ಜೊತೆಗೆ ರೋಗಗ್ರಸ್ಥ ವಾತಾವರಣಕ್ಕೆ ಕಾರಣವಾಗುತ್ತದೆ ಎನ್ನುವ ಆತಂಕ ಜನರಲ್ಲಿದೆ.

ಕೆರೆಯಲ್ಲಿ ದನಕರುಗಳು, ಆಡು-ಮೇಕೆಗಳು ನೀರು
ಕುಡಿಯುತ್ತವೆ. ಸಾರ್ವಜನಿಕರು ಬಟ್ಟೆ ಒಗೆಯುವುದು ಸೇರಿ
ಜನರಿಗೆ ವಿವಿಧ ರೀತಿಯಲ್ಲಿ ಉಪಯೋಗಕ್ಕೆ ಬರುವ ಈ ನೀರು ಚರಂಡಿ ನೀರಿನ ಮಿಶ್ರಣದಿಂದ ಕಲುಶಿತವಾಗುವುದಂತೂ ಸುಳ್ಳಲ್ಲ.


ಈ ಹಿಂದೆ ಚರಂಡಿ ನೀರನ್ನು ಕೆರೆಗೆ ಹರಿಸುತ್ತಿರುವುದರ
ವಿರುದ್ಧ ಸಾರ್ವಜನಿಕರು ವಿವಿಧ ಸಂಘಟನೆಗಳು ಪ್ರತಿಭಟನೆ
ನಡೆಸಿದ್ದರ ಪರಿಣಾಮ ಚರಂಡಿಯನ್ನು ನಿರ್ಮಿಸಿ ಬೇರೆಡೆಗೆ
ನೀರನ್ನು ಹರಿಸಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ರಸ್ತೆ
ಕಾಮಗಾರಿ ನೆಪದಲ್ಲಿ ಚರಂಡಿ ನೀರನ್ನೇ ಕೆರೆಗೆ ಹರಿಸಲು
ಮುಂದಾಗಿರುವುದು ಖಂಡನೀಯವಾಗಿದೆ.

ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮಕ್ಕೆ ಮುಂದಾಗಬೇಕೆನ್ನುವ ಒತ್ತಾಯಗಳಿವೆ.

Leave a Reply

Your email address will not be published. Required fields are marked *

error: Content is protected !!